ಸಿಎಂಗೆ ಮತ್ತೊಂದು ಗೌರ್ನರ್‌ ಕಂಟಕ - ನಿಯಮ ಮೀರಿ ಮುಡಾ ಕಾಮಗಾರಿಗೆ ಆದೇಶ - ಸಿಬಿಐ ತನಿಖೆಗೆ ಆಗ್ರಹಿಸಿ ಗೆಹಲೋತ್‌ಗೆ ದೂರು

| Published : Sep 20 2024, 05:59 AM IST

Siddaramaiah
ಸಿಎಂಗೆ ಮತ್ತೊಂದು ಗೌರ್ನರ್‌ ಕಂಟಕ - ನಿಯಮ ಮೀರಿ ಮುಡಾ ಕಾಮಗಾರಿಗೆ ಆದೇಶ - ಸಿಬಿಐ ತನಿಖೆಗೆ ಆಗ್ರಹಿಸಿ ಗೆಹಲೋತ್‌ಗೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ನಿಯಮ ಮೀರಿ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ದಾಖಲಾಗಿದೆ.

ಬೆಂಗಳೂರು :  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ನಿಯಮ ಮೀರಿ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಪ್ರಕರಣದ ವಿವರಣೆ ನೀಡುವಂತೆ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

ಮುಡಾದಿಂದ ಕೈಗೊಳ್ಳಲಾದ 387 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಿಎಂ ವಿರುದ್ಧ ಮೈಸೂರು ಮೂಲದ ಪಿ.ಎಸ್‌. ನಟರಾಜ್‌ ಎಂಬುವವರು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ದೂರು ನೀಡಿದ್ದಾರೆ. ಮುಡಾ ನಿವೇಶನ ಹಂಚಿಕೆ ವಿಚಾರವಾಗಿ ಸಿಎಂ ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟ ನಡೆಯುತ್ತಿರುವ ನಡುವೆಯೇ, ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ತಲೆನೋವು ಎದುರಾಗುವಂತಾಗಿದೆ.

ಏನಿದು ದೂರು?:

ಆಗಸ್ಟ್‌ 27ರಂದು ಪಿ.ಎಸ್‌. ನಟರಾಜ್‌ ಎಂಬುವವರು ನೀಡಿರುವ ದೂರಿನಲ್ಲಿ, ಮುಡಾದಲ್ಲಿ ನಿಗದಿತ ಅನುದಾನ ಇಲ್ಲದಿದ್ದರೂ ಸಿಎಂ ಸಿದ್ದರಾಮಯ್ಯ ಅವರ ಮೌಖಿಕ ಆದೇಶದ ಮೇರೆಗೆ ವರುಣಾ ಮತ್ತು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 387 ಕೋಟಿ ರು. ಮೊತ್ತದ ಕಾಮಗಾರಿಗಳನ್ನು ಮಾಡಲಾಗಿದೆ. ಇದು ಕರ್ನಾಟಕ ನಗರಾಭಿವೃದ್ಧಿ ವಿಧೇಯಕ 1987ರ ಸೆಕ್ಷನ್‌ 15 ಮತ್ತು 25ರ ವಿರುದ್ಧವಾಗಿದೆ. ಇದು ಅಧಿಕಾರದ ದುರುಪಯೋಗವಾಗಿದ್ದು, ಈ ಪ್ರಕರಣವನ್ನು ಸಿಬಿಐ ಮೂಲಕ ತನಿಖೆ ನಡೆಸಲು ಅನುಮತಿಸುವಂತೆ ರಾಜ್ಯಪಾಲರಿಗೆ ಕೋರಿದ್ದಾರೆ.

 ವಿವರಣೆ ಕೇಳಿರುವ ರಾಜ್ಯಪಾಲರು: 

ನಟರಾಜ್‌ ದೂರಿನ ಮೇರೆಗೆ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಸೆ. 5ರಂದು ಪತ್ರ ಬರೆದಿದ್ದು, ಮುಡಾದಿಂದ 387 ಕೋಟಿ ರು. ಮೊತ್ತದ ಕಾಮಗಾರಿಗಳನ್ನು ನಿಯಮಬಾಹಿರವಾಗಿ ನಡೆಸಲಾಗಿದೆ. ಇವೆಲ್ಲವೂ ಸಿಎಂ ಮೌಖಿಕ ಸೂಚನೆ ಮೇರೆಗೆ ಕೈಗೊಳ್ಳಲಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ. ನಟರಾಜ್‌ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ಇಡೀ ಪ್ರಕರಣದ ಕುರಿತು ಪರಿಶೀಲನೆ ನಡೆಸಬೇಕು. ಜತೆಗೆ ದಾಖಲೆ ಸಹಿತ ಪ್ರಕರಣದ ಸಂಪೂರ್ಣ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.

ರಾಜ್ಯಪಾಲರ ಸೂಚನೆ ಹಿನ್ನೆಲೆಯಲ್ಲಿ ಶಾಲಿನಿ ರಜನೀಶ್‌ ಅವರು, ನಗರಾಭಿವೃದ್ಧಿ ಇಲಾಖೆಗೆ ದಾಖಲೆಗಳನ್ನೊಳಗೊಂಡ ವರದಿ ನೀಡುವಂತೆ ಸೂಚನೆಯನ್ನೂ ನೀಡಿದ್ದಾರೆ.

ದೂರಿನಲ್ಲಿ ಏನಿದೆ?

- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಗದಿತ ಪ್ರಮಾಣದ ಅನುದಾನ ಇಲ್ಲ

- ಆದರೂ ಸಿಎಂ ಮೌಖಿಕ ಆದೇಶದ ಮೇರೆಗೆ ₹387 ಕೋಟಿ ಬಿಡುಗಡೆಯಾಗಿದೆ

- ವರುಣಾ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಮಗಾರಿ ನಡೆಸಲಾಗಿದೆ

- ಇದು ಅಧಿಕಾರ ದುರ್ಬಳಕೆ, ಕರ್ನಾಟಕ ನಗರಾಭಿವೃದ್ಧಿ ಕಾನೂನಿಗೆ ವಿರುದ್ಧವಾಗಿದೆ

- ಈ ಬಗ್ಗೆ ಸಿಬಿಐ ತನಿಖೆ ನಡೆಸಲು ಅನುಮತಿ ನೀಡಬೇಕು: ಆ.27ರಂದು ದೂರು ಸಲ್ಲಿಕೆ

ಆರೋಪ ಗಂಭೀರ: ರಾಜ್ಯಪಾಲರ ಪತ್ರ

ಆರೋಪ ಗಂಭೀರ ಸ್ವರೂಪದ್ದಾಗಿದೆ. ಇಡೀ ಪ್ರಕರಣದ ಕುರಿತು ಪರಿಶೀಲನೆ ನಡೆಸಬೇಕು. ಜತೆಗೆ ದಾಖಲೆ ಸಹಿತ ಪ್ರಕರಣದ ಸಂಪೂರ್ಣ ವಿವರಣೆ ನೀಡಬೇಕು ಎಂದು ಸೆ.5ರಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ.