ಸಾರಾಂಶ
ಕಾಂಗ್ರೆಸ್ ಸರ್ಕಾರ ದೆಹಲಿಗೆ ಐಷಾರಾಮಿ ವಿಮಾನದಲ್ಲಿ ಪ್ರಯಾಣ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು/ಮೈಸೂರು
‘ಭಾರತವು ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನದಲ್ಲಿದೆ. ದೇಶದ ಜನ ಹಸಿವಿನಿಂದ ಬಳಲುತ್ತಿರುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶೇಷ ವಿಮಾನದ ಮೂಲಕ 74 ಬಾರಿ ವಿದೇಶ ಯಾತ್ರೆ ಮಾಡಿಕೊಂಡು ಮೋಜು ಮಾಡಿದ್ದಾರೆ ಎಂದು ಹೇಳಲು ಆಗುತ್ತದೆಯೇ?’ ಎಂದು ಪ್ರಶ್ನಿಸುವ ಮೂಲಕ ತಮ್ಮ ವಿಶೇಷ ವಿಮಾನದ ಪ್ರಯಾಣವನ್ನು ಟೀಕಿಸಿರುವ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬರ ಪರಿಹಾರಕ್ಕಾಗಿ ಮನವಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ವಿಮಾನದಲ್ಲಿ ಪ್ರಯಾಣಿಸಿದ್ದನ್ನು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಇದಕ್ಕೆ ಮೊದಲು ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ ತಿರುಗೇಟು ನೀಡಿದ ಸಿಎಂ, ಮೋದಿ ಯಾವ ಫ್ಲೈಟ್ ನಲ್ಲಿ ಓಡಾಡುತ್ತಾರೆ? ಅವರದು ಐಷಾರಾಮಿ ವಿಮಾನ ಅಲ್ವಾ? ದೇಶದಲ್ಲಿ ಯಾವುದೇ ಸ್ಥಿತಿ ಇದ್ದರೂ ಮೋದಿ ಓಡಾಡುವ ಫ್ಲೈಟ್ ಎಂತಹದ್ದು. ಮೊದಲು ಅದನ್ನು ಬಿಜೆಪಿಯವರಿಗೆ ಕೇಳಿ ಎಂದು ತಿರುಗೇಟು ನೀಡಿದರು.
ಬಳಿಕ ಸರಣಿ ಟ್ವೀಟ್ ಮಾಡಿದ ಅವರು, ‘2014ರ ಜೂನ್ 15ರಿಂದ 2023ರ ಸೆಪ್ಟೆಂಬರ್‌ವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ 74 ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ. ಪ್ರಧಾನಮಂತ್ರಿಗಳ ಕಚೇರಿ ಅಧಿಕೃತ ಜಾಲತಾಣದ ಮಾಹಿತಿ ಪ್ರಕಾರವೇ ಪ್ರತಿ ಪ್ರವಾಸದ ಸರಾಸರಿ ವೆಚ್ಚ 8.9 ಕೋಟಿ ರುಪಾಯಿ. ಹೀಗಿರುವಾಗ ನನ್ನ ವಿಮಾನ ಪ್ರಯಾಣವನ್ನು ವಿರೋಧಿಸುವ ನೈತಿಕತೆ ರಾಜ್ಯ ಬಿಜೆಪಿ ನಾಯಕರಿಗೆ ಇದೆಯೇ?’ ಎಂದು ಪ್ರಶ್ನಿಸಿದ್ದಾರೆ.ರಾಜ್ಯದ ಬರ ಪರಿಸ್ಥಿತಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚಿಸುವ ಸಲುವಾಗಿ ವಿಶೇಷ ವಿಮಾನದಲ್ಲಿ ನಾನು ಪ್ರಯಾಣ ಮಾಡಿದ್ದೇನೆ. ಇದನ್ನು ಬಿಜೆಪಿಯವರು ಟೀಕಿಸುತ್ತಿದ್ದಾರೆ. ದೇಶದ ಜನ ಹಸಿವಿನಿಂದ ಬಳಲುತ್ತಿರುವ ವೇಳೆ ಪ್ರಧಾನಿಗಳು ವಿಶೇಷ ವಿಮಾನದ ಮೂಲಕ ವಿದೇಶ ಯಾತ್ರೆ ಮಾಡಿಕೊಂಡು, ಮೋಜು ಮಾಡುತ್ತಾರೆಂದು ಹೇಳಲು ಬರುತ್ತದೆಯಾ? ಎಂದು ಕಿಡಿ ಕಾರಿದ್ದಾರೆ.ಬಿಜೆಪಿಯವರು ಮೋಜು ಮಾಡಿದ್ದು ಬಡಜನರ ತೆರಿಗೆ ಹಣ:ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರ ಬೀಳಿಸಿ, ಶಾಸಕರನ್ನು ವಿಶೇಷ ವಿಮಾನದಲ್ಲಿ ದೆಹಲಿ, ಮುಂಬೈ ಸುತ್ತಾಡಿಸಿ, ಐಷಾರಾಮಿ ಹೋಟೆಲ್‌ಗಳಲ್ಲಿ ವಾರಗಟ್ಟಲೆ ಠಿಕಾಣಿ ಹಾಕಿಸಿ ಮೋಜು ಮಸ್ತಿ ಮಾಡಿದ್ದರು. ಇದಕ್ಕಾಗಿ ಬಿಜೆಪಿಯವರು ಖರ್ಚು ಮಾಡಿದ ನೂರಾರು ಕೋಟಿ ಹಣ ಬಿಜೆಪಿಯವರು ನರೇಗಾ ಯೋಜನೆಯಲ್ಲಿ ಕೂಲಿ ಮಾಡಿ ಕೂಡಿಟ್ಟದ್ದಲ್ಲ, ರಾಜ್ಯದ ಬಡಜನರು ಕಷ್ಟಪಟ್ಟು ಕಟ್ಟಿದ ತೆರಿಗೆ ಹಣ ಎಂದು ತಿರುಗೇಟು ನೀಡಿದ್ದಾರೆ.