ಎಚ್ಡಿಕೆ ಮಂತ್ರಿಯಾದ ತಕ್ಷಣ 2 ಕೊಂಬು ಬರುವುದಿಲ್ಲ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ

| Published : Nov 18 2024, 12:03 AM IST / Updated: Nov 18 2024, 04:34 AM IST

n chaluvarayaswamy

ಸಾರಾಂಶ

ಎಚ್ಡಿಕೆ ಕೇಂದ್ರ ಮಂತ್ರಿಯಾದ ತಕ್ಷಣ ಎರಡು ಕೊಂಬು ಬರುವುದಿಲ್ಲ. ಚುನಾವಣೆಯಲ್ಲಿ ಜನ ಗೆಲ್ಲಿಸಿದ್ದಾರೆ. ತಾತ್ಕಾಲಿಕವಾಗಿ ಮಂತ್ರಿ ಸ್ಥಾನ ಪಡೆದುಕೊಂಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಕುಮಾರಸ್ವಾಮಿ ಅವರು ಇನ್ನು ಮುಂದೆ ಬಾಯಿಗೆ ಬಂದಂತೆ ಮಾತನಾಡಿದರೆ ಅದಕ್ಕೆ ನಾನು ಸಹ ತಕ್ಕ ಉತ್ತರ ನೀಡಬೇಕಾಗುತ್ತದೆ.

 ಮದ್ದೂರು :  ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಹಿಡಿತವಿಲ್ಲದ ನಾಲಿಗೆಯಿಂದ ಬಾಯಿಗೆ ಬಂದಂತೆ ಮಾತನಾಡಿದರೆ ನಾನು ಕೂಡ ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

 ತಾಲೂಕಿನ ಕೊಪ್ಪ ಹೋಬಳಿ ಹೊಸಗಾವಿ ಗ್ರಾಮದಲ್ಲಿ ಹೈ ಮಾಸ್ಕ್ ಲೈಟ್ ಉದ್ಘಾಟನೆ ನಂತರ ಕೊಚ್ಚೆ ಎಂಬ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಮನುಷ್ಯ ನಡತೆಯಿಂದ ದೊಡ್ಡವರಾಗಬೇಕೆ ಹೊರತು ಮಾತಿನಿಂದ ಯಾರು ದೊಡ್ಡವರಾಗುವುದಿಲ್ಲ ಎಂದರು.

ಎಚ್ಡಿಕೆ ಕೇಂದ್ರ ಮಂತ್ರಿಯಾದ ತಕ್ಷಣ ಎರಡು ಕೊಂಬು ಬರುವುದಿಲ್ಲ. ಚುನಾವಣೆಯಲ್ಲಿ ಜನ ಗೆಲ್ಲಿಸಿದ್ದಾರೆ. ತಾತ್ಕಾಲಿಕವಾಗಿ ಮಂತ್ರಿ ಸ್ಥಾನ ಪಡೆದುಕೊಂಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಕುಮಾರಸ್ವಾಮಿ ಅವರು ಇನ್ನು ಮುಂದೆ ಬಾಯಿಗೆ ಬಂದಂತೆ ಮಾತನಾಡಿದರೆ ಅದಕ್ಕೆ ನಾನು ಸಹ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿ ಅವರು ಇತಿಹಾಸ ಚರ್ಚೆ ಮಾಡಬೇಕಾದರೆ ಸದನದಲ್ಲಿ ಚರ್ಚೆ ಮಾಡಲಿ ಅದನ್ನು ಬಿಟ್ಟು ಮಾಧ್ಯಮದವರ ಮುಂದೆ ನಾಲಿಗೆ ಹರಿಯಬಿಟ್ಟು ನಾಲಿಗೆ ಕೆಡಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಚರ್ಚೆಗೆ ಬರುವುದಾದರೆ ಒಂದು ವೇದಿಕೆ ಸಿದ್ಧ ಮಾಡಲಿ ಆಗ ಯಾರು ಹೊಲಸು, ಕಚಡ ಎಂದು ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು.

ಜೆಡಿಎಸ್ ಒಂದು ಕುಟುಂಬದ ಪಕ್ಷವಾಗಿದೆ. ಈ ವಿಚಾರದಲ್ಲಿ ಕೇಂದ್ರ ಮಂತ್ರಿ ಕುಮಾರಸ್ವಾಮಿ ಹಿಟ್ ಆಂಡ್ ರನ್ ಆಗಬಾರದು. ಅವರ ಇತಿಹಾಸ ಹೇಳಲು ನನಗೂ ಬರುತ್ತದೆ. ಮಂಡ್ಯ ಜಿಲ್ಲೆಯ ಗೌರವ ಕಾಪಾಡಿಕೊಳ್ಳುವುದು ನನ್ನ ಧರ್ಮ. ಅವರ ಗೌರವ ಕಳೆಯಲು ನಾನು ತಯಾರಿಲ್ಲ ಎಂದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮನ್ಮುಲ್ ಮಾಜಿ ಅಧ್ಯಕ್ಷ ಚಿಕ್ಕೋನಹಳ್ಳಿ ತಮ್ಮಯ್ಯ, ಮುಖಂಡ ತ್ಯಾಗರಾಜು ಸೇರಿದಂತೆ ಹಲವರು ಇದ್ದರು.