ಸಾರಾಂಶ
ಬೆಂಗಳೂರು : ಶಾಸಕ ಮುನಿರತ್ನ ಅವರನ್ನು ದ್ವೇಷದ ರಾಜಕಾರಣದಿಂದ ಬಂಧಿಸಲಾಗಿದೆ. ಕಾನೂನಿಗೆ ಯಾರೂ ಅತೀತರಲ್ಲ. ಆದರೆ, ಆ ಧ್ವನಿ ಮುದ್ರಣ ಅವರದ್ದೇ ಎಂಬುದು ಸಾಬೀತಾದ ಬಳಿಕ ಬಂಧಿಸಬೇಕಿತ್ತು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿ ನಗರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಲೀಡ್ ಬಂದಿರುವುದು ಕೂಡ ಇದಕ್ಕೆ ಕಾರಣ. ಇದು ಪೂರ್ವ ಯೋಜಿತ ಎಂಬುದು ಎಲ್ಲರಿಗೂ ಗೊತ್ತಿದೆ. ಈ ರೀತಿ ಪ್ರಕರಣ ದಾಖಲಾದಾಗ ಪರಿಶೀಲಿಸಿಯೇ ಕ್ರಮ ಕೈಗೊಳ್ಳಬೇಕು. ರಾಯಚೂರಿನಲ್ಲಿ ಪೊಲೀಸ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಶಾಸಕನನ್ನು ಮುಖ್ಯಮಂತ್ರಿ ಮನೆಗೆ ಕರೆಸಿಕೊಂಡು ಕಾಫಿ ಕೊಟ್ಟಿದ್ದರು. ಕೃಷಿ ಅಧಿಕಾರಿ ಆತ್ಮಹತ್ಯೆಗೆ ಮುಂದಾದರೂ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಸರ್ಕಾರ ಎಷ್ಟೇ ಪ್ರಕರಣ ದಾಖಲಿಸಿದರೂ ಬಿಜೆಪಿ ಹೆದರುವುದಿಲ್ಲ. ಸರ್ಕಾರಕ್ಕೆ ಈಗ ಭಯ ಬಂದಿದೆ. ಪ್ರತಿ ದಿನ ಸರ್ಕಾರದ ವಸೂಲಿ, ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದೆ. ಹೀಗಾಗಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನಿಂದ ಮುಸ್ಲಿಂ ಓಲೈಕೆ: ಮಂಡ್ಯದ ನಾಗಮಂಗಲದಲ್ಲಿ ಗಣಪತಿಗೂ ನಿರ್ಬಂಧ ವಿಧಿಸಲಾಗಿದೆ. ಮತಾಂಧರು ಬಾಂಬ್, ಮಚ್ಚು ಬಳಸಿ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಕಾಂಗ್ರೆಸ್ ನ ಮುಸ್ಲಿಂರ ಓಲೈಕೆ ರಾಜಕಾಣದಿಂದಲೇ ಹೀಗಾಗಿದೆ. ಹಿಂದೂಗಳು ಮುಂದೊಂದು ದಿನ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಇದು ಪೂರ್ವ ಯೋಜಿತ: ಭ್ರಷ್ಟಾಚಾರ ಮತ್ತು ಕೋಮುಗಲಭೆ ಪ್ರಕರಣವನ್ನು ಬೇರೆಡೆ ತಿರುಗಿಸಲು ಈ ರೀತಿ ಮಾಡಿದ್ದಾರೆ. ಹಿರಿಯ ನಾಯಕ ಡಾ.ಜಿ.ಪರಮೇಶ್ವರ್ ಗೃಹ ಸಚಿವರಾಗಿದ್ದು, ಇಂತಹ ಕೆಲಸ ಮಾಡುವುದು ಶೋಭೆ ತರುವುದಿಲ್ಲ. ಇದು ಬಹಳ ಹಳೆಯ ಪ್ರಕರಣ ಎನ್ನಲಾದರೂ ದಿಢೀರನೇ ಶಾಸಕ ಮುನಿರತ್ನ ಅವರನ್ನು ಬಂಧಿಸಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ ನೇರವಾಗಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಇದು ಪೂರ್ವ ಯೋಜಿತ ಎಂಬುದು ಇದರಿಂದಲೇ ತಿಳಿಯಲಿದೆ ಎಂದು ಆರ್.ಅಶೋಕ್ ಹೇಳಿದರು.