ಜನರಿಂದ ಆಯ್ಕೆಯಾದ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ-ಜೆಡಿಎಸ್ ಯತ್ನ: ಡಾ. ಯತೀಂದ್ರ ಆರೋಪ

| Published : Aug 20 2024, 12:50 AM IST / Updated: Aug 20 2024, 04:29 AM IST

yathindra siddaramaiah

ಸಾರಾಂಶ

ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ- ಜೆಡಿಎಸ್ ಮುಂದಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ.  

 ಮೈಸೂರು :  ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸಿ ಪ್ರಜಾಪ್ರಭುತ್ವ ನಾಶಪಡಿಸಲು ಬಿಜೆಪಿ- ಜೆಡಿಎಸ್ ಮುಂದಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.

ನಗರದ ಗಾಂಧಿಚೌಕದಲ್ಲಿ ಕಾಂಗ್ರೆಸ್ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಆಧಾರ ರಹಿತ ಆರೋಪ ಮಾಡಿ ಅಸ್ಥಿರಗೊಳಿಸಲು ಹೊಂಚು ಹಾಕಲಾಗುತ್ತಿದೆ. ಸಿದ್ದರಾಮಯ್ಯ ಅವರದ್ದು ವಿಚಾರವೇ ಅಲ್ಲ. ಬಿಜೆಪಿಯೇತರ ಪಕ್ಷಗಳು ಅಧಿಕಾರ ನಡೆಸುತ್ತಿರುವ ರಾಜ್ಯಗಳಲ್ಲೂ ಇದೇ ರೀತಿ ರಾಜ್ಯಪಾಲರಿಗೆ ದೂರು ನೀಡಿ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಖಾಸಗಿ ದೂರು ಆಧಾರಿಸಿ ರಾಜ್ಯಪಾಲರಪು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುತ್ತಾ ಹೋದರೆ ಯಾವ ಸರ್ಕಾರಗಳೂ ಉಳಿಯುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನು ಇದನ್ನು ಗಂಭೀರವಾಗಿ ಪರಿಗಣಿಸಿ ಸಂವಿಧಾನ ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.

ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಇದರ ವಿರುದ್ಧ ನಾವು ಕಾನೂನು ಮೂಲಕವೇ ಹೋರಾಟ ಮಾಡುತ್ತೇವೆ ಎಂದರು.

ಸಿದ್ಧರಾಮಯ್ಯ ಅವರ ಪರವಾಗಿ ಹೈಕಮಾಂಡ್ ನಿಂದ ಹಿಡಿದು ತಾಲೂಕು ಮಟ್ಟದವರೆಗೂ ಕಾಂಗ್ರೆಸ್ ಪಕ್ಷ ಬೆಂಬಲಕ್ಕೆ ನಿಂತಿದೆ. ಸುಳ್ಳು ಆರೋಪ ಹೊರಿಸಿ ಸರ್ಕಾರ ಹತ್ತಿಕ್ಕಬೇಕು ಎಂದಾಗ ನಮ್ಮ ಒಗ್ಗಟ್ಟು ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಪಕ್ಷದ ಜೊತೆಗೆ ಈ ರಾಜ್ಯದ ಜನರು ಸಿದ್ಧರಾಮಯ್ಯ ಅವರ ಪರ ನಿಂತಿದ್ದಾರೆ ಎಂದರು.

ನಮ್ಮ ತಂದೆಯವರು ಮಾಡಿರುವುದರಲ್ಲಿ ತಪ್ಪಿಲ್ಲ ಎಂಬುದು ನಮ್ಮ ತಾಯಿಗೂ ಗೊತ್ತಿದೆ. ಆದರೂ ನನ್ನ ವಿಚಾರದಲ್ಲಿ ಇವರ ಮೇಲೆ ಆರೋಪ ಬರುತ್ತಿದೆಯಲ್ಲಾ ಎಂಬ ಬೇಸರವೂ ಇದೆ. ಕಾನೂನು ಮೂಲಕ ಹೋರಾಟ ನಡೆಸಿ ಎಲ್ಲವೂ ಸರಿಯಾಗಲಿದೆ.

- ಡಾ. ಯತೀಂದ್ರ ಸಿದ್ದರಾಮಯ್ಯ