ಸಾರಾಂಶ
ಬೆಂಗಳೂರು ದಕ್ಷಿಣ : ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಬನ್ನೇರುಘಟ್ಟ ಬಿಜೆಪಿ ಮುಖಂಡ ಜಯರಾಮ್ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಆಗುತ್ತಿದ್ದು, ಕಾಂಗ್ರೆಸ್ ಹಾಲಿ ಸಂಸದ ಡಿ.ಕೆ. ಸುರೇಶ ಆಪರೇಷನ್ ಮೂಲಕ ಬನ್ನೇರುಘಟ್ಟದ ಬಿಜೆಪಿ ಮುಖಂಡ ಜಯರಾಮ್ ಹಾಗೂ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಮೂಲಕ ಬಿಜೆಪಿ ಅಭ್ಯರ್ಥಿ ಡಾ। ಸಿ.ಎನ್.ಮಂಜುನಾಥ್ ಅವರಿಗೆ ಟಾಂಗ್ ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಯರಾಮ್ ಮತ್ತೆ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಗೆ ಸೇರ್ಪಡೆ ಆಗಿದ್ದರು. ಈಗ ಮತ್ತೆ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರಿದ್ದು, ಚುನಾವಣೆ ವೇಳೆ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿರುವ ಜಯರಾಮ್ ಅವರು ತಮ್ಮ ಕೆಲವು ಅಕ್ರಮಗಳನ್ನು ಮರೆಮಾಚಿಕೊಳ್ಳಲು ಈ ರೀತಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದಾರೆ ಎನ್ನುವ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ.ಜಯರಾಮ್ ಜೊತೆಗಿರುವ ಬಿಜೆಪಿ ಮುಖಂಡರು ಗೊಂದಲಕ್ಕೆ ಒಳಗಾಗಿದ್ದು ,ಈ ಬಾರಿ ಕೆಲವರು ಕಾಂಗ್ರೆಸ್ ಗೆ ಹೋದರೆ ಇನ್ನೂ ಕೆಲವರು ಬಿಜೆಪಿಯಲ್ಲೇ ಉಳಿದುಕೊಳ್ಳಲು ತೀರ್ಮಾನಿಸಿದ್ದಾರೆ .ಬಿಜೆಪಿ ಮುಖಂಡ ಜಯರಾಮ್, ಗ್ರಾಮ ಪಂಚಾಯತಿ ಸದಸ್ಯ ಹರೀಶ್, ಚೇತನ್ ಕುಮಾರ್, ಸಂಪಂಗಿ, ಎಲ್ಲಮ್ಮ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಮುಖಂಡರುಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಸಂಸದ ಡಿ.ಕೆ. ಸುರೇಶ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಈಗಾಗಲೇ ಹಲವಾರು ಜನ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎನ್ನುವ ನಿಟ್ಟಿನಲ್ಲಿ ಪಕ್ಷಕ್ಕೆ ಬರುತ್ತಿರುವ ಎಲ್ಲರನ್ನೂ ಗೌರವದಿಂದ ನೋಡಿಕೊಳ್ಳುವ ಕೆಲಸ ಆಗಲಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಅಚ್ಯುತ್ ರಾಜ್ ಮಾತನಾಡಿ, ಡಿ.ಕೆ. ಸುರೇಶ್ ಅವರು ಪಾರ್ಲಿಮೆಂಟ್‌ನಿಂದ ಗ್ರಾಮ ಪಂಚಾಯಿತಿಯವರೆಗಿನ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಿದ್ದು, ಜನಸಾಮಾನ್ಯರ ಕಷ್ಟ ಸುಖ ಹಾಗೂ ಅಭಿವೃದ್ಧಿ ಕೆಲಸಗಳ ಬಗ್ಗೆ ಅವರ ಚಿಂತನೆ ನಿರಂತರವಾಗಿದೆ. ಮುಂದಿನ ದಿನಗಳಲ್ಲಿ ಕಾವೇರಿ ಕುಡಿಯುವ ನೀರು ಸಹ ಈ ಭಾಗಕ್ಕೆ ಸಂಪೂರ್ಣವಾಗಿ ತಲುಪಬೇಕಾದರೆ ಡಿ.ಕೆ. ಸುರೇಶ್ ಅವರು ಗೆದ್ದು ಬರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಮೂಲ್ ಮಾಜಿ ಅಧ್ಯಕ್ಷ ಆರ್. ಕೆ. ರಮೇಶ್, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಎಂ.ಬಾಬು, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಅಚ್ಯುತ್‌ರಾಜು, ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್,ಡಿ.ಕೆ.ವಿನೋದ್, ಆರ್.ಡಿ.ರಾಜಣ್ಣ ಮತ್ತಿತರರು ಹಾಜರಿದ್ದರು.