ಸಾರಾಂಶ
ನವದೆಹಲಿ: ಸೋನಿಯಾ ತೆರವು ಮಾಡಿದ ರಾಯ್‌ಬರೇಲಿಯಿಂದ ಇನ್ನೇನು ಪ್ರಿಯಾಂಕಾ ಸ್ಪರ್ಧಿಸಿಯೇ ಬಿಟ್ಟರು ಎನ್ನುವ ಹೊತ್ತಿನಲ್ಲಿ ಅವರು ಸ್ಪರ್ಧೆಯಿಂದಲೇ ದೂರ ಉಳಿಯುವ ನಿರ್ಧಾರದ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಆದರೆ ಇಂಥದ್ದೊಂದು ನಿರ್ಧಾರದ ಹಿಂದೆ ಉಳಿದ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ಅಸ್ತ್ರ ತಪ್ಪಿಸುವ ಅಂಶ ಉದ್ದೇಶ ಇದೆ ಎನ್ನಲಾಗಿದೆ.ಈಗಾಗಲೇ ಗಾಂಧಿ ಕುಟುಂಬದಿಂದ ಸೋನಿಯಾ ರಾಜ್ಯಸಭೆ ಪ್ರವೇಶ ಮಾಡಿದ್ದಾರೆ. ರಾಹುಲ್ ವಯನಾಡಿನಲ್ಲಿ ಗೆಲುವುದು ಬಹುತೇಕ ಖಚಿತ. ಹೀಗಿರುವಾಗ ಅದೇ ಕುಟುಂಬದ ಮೂರನೇ ವ್ಯಕ್ತಿಯಾಗಿ ತಾವು ಕಣಕ್ಕೆ ಇಳಿದರೆ, ಅದು ಈಗಾಗಲೇ ತಮ್ಮ ಕುಟುಂಬದ ವಿರುದ್ಧ ವಂಶಪಾರಂಪರ್ಯ ರಾಜಕೀಯದ ಸತತ ವಾಗ್ದಾಳಿ ನಡೆಸುತ್ತಿರುವ ಬಿಜೆಪಿಗೆ ಮತ್ತೊಂದು ದೊಡ್ಡ ಅಸ್ತ್ರ ನೀಡಿದಂತಾಗುತ್ತದೆ.
ಅದನ್ನು ತಪ್ಪಿಸಲು ಸದ್ಯಕ್ಕೆ ಚುನಾವಣೆಯಿಂದ ದೂರ ಇರುವುದೇ ಉತ್ತಮ ಎಂಬ ನಿರ್ಧಾರಕ್ಕೆ ಸ್ವತಃ ಪ್ರಿಯಾಂಕಾ ಬಂದರು ಎನ್ನಲಾಗಿದೆ.ಇನ್ನು ಮೊದಲ ಮೂರು ಹಂತದ ಚುನಾವಣೆಯಲ್ಲಿ ಗಾಂಧಿ ಕುಟುಂಬವನ್ನು ನೇರವಾಗಿ ಗುರಿಯಾಗಿಸಿ ಪ್ರಧಾನಿ ಮೋದಿ ಸತತ ವಾಗ್ದಾಳಿ ನಡೆಸುತ್ತಿದ್ದಾರೆ.
ಅವರಿಗೆ ಸೂಕ್ತವಾಗಿ ತಿರುಗೇಟು ನೀಡುತ್ತಿರುವುದು ಪ್ರಿಯಾಂಕಾ ಮಾತ್ರ. ಇಂಥ ಹೊತ್ತಿನಲ್ಲಿ ಪ್ರಿಯಾಂಕಾ ಕಣಕ್ಕೆ ಇಳಿದು ತಮ್ಮ ಗಮನವನ್ನು ಕೇವಲ ಅಮೇಠಿ ಅಥವಾ ರಾಯ್‌ಬರೇಲಿಗೆ ಸೀಮಿತ ಮಾಡಿದರೆ ಮೋದಿಗೆ ಏಟಿಗೆ ತಿರುಗೇಟು ನೀಡುವ ಅವಕಾಶವನ್ನೇ ಕಳೆದುಕೊಂಡಂತೆ ಆಗುತ್ತದೆ ಎನ್ನುವ ಲೆಕ್ಕಾಚಾರ ನಿರ್ಧಾರಕ್ಕೆ ಕಾರಣವಾಗಿದೆ.
ಹೇಗಿದ್ದರೂ ರಾಹುಲ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಎರಡೂ ಕಡೆ ರಾಹುಲ್ ಗೆಲುವು ಬಹುತೇಕ ಖಚಿತವಾಗಿದ್ದು, ಈ ಪೈಕಿ ಒಂದರಲ್ಲಿ ರಾಜೀನಾಮೆ ಅನಿವಾರ್ಯ. ಆ ಹಂತದಲ್ಲಿ ರಾಹುಲ್ ರಾಜೀನಾಮೆ ನೀಡುವ ಕ್ಷೇತ್ರದಲ್ಲಿ ಉಪಚುನಾವಣೆಗೆ ನಿಂತು ಲೋಕಸಭೆಗೆ ಪ್ರವೇಶ ಮಾಡುವುದು ಅಥವಾ ರಾಜ್ಯಸಭೆ ಮೂಲಕ ಸಂಸತ್ ಪ್ರವೇಶದ ಉದ್ದೇಶವನ್ನು ಪ್ರಿಯಾಂಕಾ ಹೊಂದಿದ್ದಾರೆ ಎನ್ನಲಾಗಿದೆ.