ಬೆಂಗಳೂರು ಜನ ಬದಲಾವಣೆ ಬಯಸಿದ್ದಾರೆ: ಮನ್ಸೂರ್

| Published : Apr 21 2024, 02:19 AM IST / Updated: Apr 21 2024, 05:59 AM IST

Sukanta Majumdar

ಸಾರಾಂಶ

ಬೆಂಗಳೂರು ಸೆಂಟ್ರಲ್‌ ಪೊಕಸಬಾ ಕ್ಷೇತ್ರದ ಅಭ್ಯರ್ಥಿ ಮನ್ಸೂರ್‌ಅಲಿ ಖಾನ್‌ ಅವರ ಸಂದರ್ಶನ.

ಸಂದರ್ಶನ

ಮಂಜುನಾಥ್ ನಾಗಲೀಕರ್‌ 

ದೇಶದ ಸಿಲಿಕಾನ್ ವ್ಯಾಲಿ, ಸ್ಟಾರ್ಟ್‌ಅಪ್ ರಾಜಧಾನಿ ಎಂದೇ ಹೆಸರಾದ ಬೆಂಗಳೂರಿನಲ್ಲಿ ಕಾರ್ಪೋರೇಟ್ ಸಂಸ್ಕೃತಿಯ ಜೊತೆಗೆ ಬೆಂದಕಾಳೂರಿನ ಪುರಾತನ ಪರಂಪರೆಯನ್ನು ಮಡಿಲಿನಲ್ಲಿ ಇಟ್ಟುಕೊಂಡಿದೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ. ಎಂಟು ವಿಧಾನಸಭೆ ವ್ಯಾಪ್ತಿಯನ್ನು ಹೊಂದಿರುವ ಈ ಕ್ಷೇತ್ರ ರಚನೆಯಾದ ನಂತರ ನಡೆದ ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ನಾಗಲೋಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಆತ್ಮವಿಶ್ವಾಸದಿಂದ ಪ್ರಚಾರ ಮಾಡುತ್ತಿದ್ದಾರೆ. ಮೂರು ಬಾರಿ ಒಬ್ಬರೇ ಸಂಸದರನ್ನು ಕಳುಹಿಸಿರುವ ಕಾಸ್ಮೋಪಾಲಿಟನ್ ನಗರದ ಜನತೆ ಬದಲಾವಣೆ ಬಯಸಿದ್ದು, ಈ ಬಾರಿ ಗೆಲುವು ನನ್ನದೇ ಎಂಬ ವಿಶ್ವಾಸ ಹೊಂದಿರುವ ಮನ್ಸೂರ್‌ ಅಲಿಖಾನ್‌ ಬೆಂಗಳೂರು ನಗರದ ಸಮಸ್ಯೆ ಹಾಗೂ ಅದರ ಪರಿಹಾರೋಪಾಯದ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದು 

ಹೀಗೆ.ಕೌಟುಂಬಿಕ ರಾಜಕಾರಣದ ಹಿನ್ನೆಲೆಯಲ್ಲಿ ನಿಮಗೆ ಟಿಕೆಟ್‌ ಸಿಕ್ಕಿದೆ ಅಂತಾ ಆರೋಪವಿದೆ?

ರಾಜಕೀಯ ಹಿನ್ನೆಲೆ ನನಗೆ ಇದೆ. ಆದರೆ, ನಾನು ಅನೇಕ ವರ್ಷಗಳಿಂದ ಕೆಪಿಸಿಸಿಯಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ವಿಧಾನಸಭೆ ಚುನಾವಣೆ ವೇಳೆ ಸಂವಹನ ವಿಭಾಗದ ಉಪಾಧ್ಯಕ್ಷನಾಗಿದ್ದೆ. ತೆಲಂಗಾಣ ರಾಜ್ಯದ ಉಸ್ತುವಾರಿ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ, ನನಗೆ ಪಕ್ಷದಲ್ಲಿ ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ. 2013, 2018ರಲ್ಲಿ ವಿಧಾನಸಭೆ ಚುನಾವಣೆಗೆ ಟಿಕೆಟ್‌ಗಾಗಿ ಪ್ರಯತ್ನಿಸಿದ್ದೆ. ಆದರೆ, ಅವಕಾಶ ಸಿಕ್ಕಿರಲಿಲ್ಲ. ಈಗ ಎಲ್ಲಾ ಅನುಭವ ಬಳಸಿಕೊಂಡು ಚುನಾವಣೆ ಎದುರಿಸುತ್ತಿದ್ದೇನೆ.

3 ಬಾರಿ ಗೆದ್ದಿರುವ ಹಾಲಿ ಸಂಸದರನ್ನು ಹೇಗೆ ಎದುರಿಸುವಿರಿ?

ಜನ ಮನಸ್ಸು ಮಾಡಿದರೆ ಏನು ಬೇಕಾದರೂ ಬದಲಿಸುತ್ತಾರೆ. ಇತಿಹಾಸವನ್ನು ನೋಡಿದರೆ ಘಟಾನುಘಟಿಗಳೇ ಸೋತಿದ್ದಾರೆ. ಬದಲಾವಣೆ ಬೇಕೆಂದು ಜನ ನಿರ್ಧಾರ ಮಾಡಿದರೆ ಮುಗಿಯಿತು. ಪ್ರಚಾರದ ವೇಳೆ ಜನರನ್ನು ಭೇಟಿ ಮಾಡಿದಾಗ ತಮ್ಮ ಸಂಸದ ಯಾರು? ಅವರನ್ನು ನೋಡಿಯೇ ಇಲ್ಲ. ಕೋವಿಡ್ ಸಂದರ್ಭದಲ್ಲಿ ಅವರು ಕಾಣಿಸಲಿಲ್ಲ ಎನ್ನುತ್ತಿದ್ದಾರೆ. 15 ವರ್ಷಗಳಿಂದ ಸಂಸದರಾದವರು ಜನರನ್ನು ಭೇಟಿ ಮಾಡಿಲ್ಲವೆಂದರೆ ಏನರ್ಥ? ಹೀಗಾಗಿ, ಅಭಿವೃದ್ಧಿ ವಿಚಾರಗಳನ್ನೇ ಮುಂದಿಟ್ಟುಕೊಂಡು ಹಾಲಿ ಸಂಸದರನ್ನು ಎದುರಿಸುತ್ತಿದ್ದೇನೆ.-

ಈ ಕ್ಷೇತ್ರದಲ್ಲಿ ಕಳೆದ 2 ದಶಕಗಳಿಂದ ರಾಜ್ಯದಿಂದ ಮುಸ್ಲಿಂ ಸಂಸದರು ಆಯ್ಕೆಯಾಗಿಲ್ಲ?

ನಾನು ಧರ್ಮವನ್ನು ಖಾಸಗಿಯಾಗಿ ನೋಡುತ್ತೇನೆ. ಹೀಗಾಗಿ, ಉಳಿದ ಅಭ್ಯರ್ಥಿಗಳಂತೆ ನಾನು ಕೂಡ ಒಬ್ಬ ಅಭ್ಯರ್ಥಿಯಷ್ಟೇ. ನಾಳೆ ನಾನು ಸಂಸದನಾಗಿ ಆಯ್ಕೆಯಾದರೆ ಎಲ್ಲ ವರ್ಗ, ಸಮುದಾಯಗಳ ಪ್ರತಿನಿಧಿಯಾಗಿ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.14ರಷ್ಟು ಇದೆ. ಅದಕ್ಕೆ ತಕ್ಕಂತೆ ಸಮಾಜದಲ್ಲಿ ಪ್ರಾತಿನಿಧ್ಯ ಇರಬೇಕು. ಆದರೆ, ನಮ್ಮ ರಾಜಕೀಯ ಎದುರಾಳಿಗಳು ಸಮಾಜದಲ್ಲಿ ಕೋಮು ಧ್ರುವೀಕರಣ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧೀರ್ಘಾವಧಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. 

ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯ ಇರಬೇಕು ಎಂಬುದು ನನ್ನ ಅಬಿಪ್ರಾಯ.ಬೆಂಗಳೂರು ಜನ ನಿಮ್ಮನ್ನು ಏಕೆ ಆಯ್ಕೆ ಮಾಡಬೇಕು?

ಬೆಂಗಳೂರು ನಗರವು ಉತ್ತಮ ಮೂಲಸೌಕರ್ಯಗಳು, ಸಮೂಹ ಸಾರಿಗೆ, ಶಿಕ್ಷಣ, ಆರೋಗ್ಯದಲ್ಲಿ ಗಣನೀಯ ಬದಲಾವಣೆ ಮೂಲಕ ಸುಸ್ಥಿರ ಅಭಿವೃದ್ಧಿ ಕಾಣಬೇಕು ಎನ್ನುವ ಕನಸುಗಳನ್ನು ಹೊಂದಿದ್ದೇನೆ. ಈಗಿನ ಸಂಸದರಿಗೆ ಜನ 15 ವರ್ಷಗಳಿಂದ ಅವಕಾಶ ಕೊಟ್ಟಿದ್ದಾರೆ. ಕ್ಷೇತ್ರಕ್ಕಾಗಿ ಅವರು ಏನು ಮಾಡಿದ್ದಾರೆ ಎಂದು ಅವರಿಗೇ ಗೊತ್ತಿಲ್ಲ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅವರದೇ ಸರ್ಕಾರ ಇತ್ತು. ಆದರೆ, ಅಭಿವೃದ್ಧಿ ಆಗಿಲ್ಲ. ಬೆಂಗಳೂರು ಕೇಂದ್ರದ ಅಭಿವೃದ್ಧಿ ವಿಚಾರವಾಗಿ ಸಂಸತ್ತಿನಲ್ಲಿ ಅವರು ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ? ಎಂದರೆ ಉತ್ತರವಿಲ್ಲ. ಹೀಗಾಗಿ, ಬೆಂಗಳೂರು ಜನ ಬದಲಾವಣೆಗೆ ನಿರ್ಧರಿಸಿದ್ದಾರೆ. ಅಭಿವೃದ್ಧಿಗಾಗಿ ಜನ ನನ್ನನ್ನು ಆಯ್ಕೆ ಮಾಡಬೇಕು.

ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ ಅಂತೀರಲ್ಲ, ಹೇಗೆ?

ಇಡೀ ದೇಶದಲ್ಲಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಅದರಲ್ಲಿ ಬೆಂಗಳೂರಿನ ಪಾಲು ದೊಡ್ಡದಿದೆ. ಆದರೆ, ಅಭಿವೃದ್ಧಿ ವಿಚಾರಕ್ಕೆ ಬಂದರೆ ಬೆಂಗಳೂರನ್ನು ನಿರ್ಲಕ್ಷಿಸಲಾಗಿದೆ. ಬೆಂಗಳೂರು ನೀಡುವ ಬೃಹತ್ ಪ್ರಮಾಣದ ತೆರಿಗೆಗೆ ತಕ್ಕಂತೆ ಅನುದಾನ ನೀಡುತ್ತಿಲ್ಲ. ಕೇಂದ್ರದ ಇಂತಹ ಮಲತಾಯಿ ಧೋರಣಿಯನ್ನು ಬೆಂಗಳೂರನ್ನು ಪ್ರತಿನಿಧಿಸುತ್ತಿರುವ ಈಗಿನ ಸಂಸದರು ಪ್ರಶ್ನಿಸಬೇಕಿತ್ತು. ಆದರೆ, ಮೌನಿಯಾಗಿ ಕುಳಿತಿದ್ದಾರೆ. 

ಆದರೆ, ನಾನು ಈ ರೀತಿ ಅನ್ಯಾಯವಾಗಲು ಬಿಡುವುದಿಲ್ಲ.ಇಷ್ಟಕ್ಕೂ ಕೇಂದ್ರ ಏಕೆ ಹೆಚ್ಚಿನ ಅನುದಾನ ನೀಡಬೇಕು?

ಬೆಂಗಳೂರು ಕಾಸ್ಮೋಪಾಲಿಟನ್ ನಗರ. ದೇಶದ ಎಲ್ಲಾ ಭಾಗಗಳಿಂದ ಜನ ಇಲ್ಲಿಗೆ ಬಂದು ಹೋಗುತ್ತಿರುತ್ತಾರೆ. ಆದ ಕಾರಣ ಬೆಂಗಳೂರಿಗೆ ಹೆಚ್ಚು ಅನುದಾನ ನೀಡಬೇಕು. ಮೂಲಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮಾನ ಜವಾಬ್ದಾರಿ ಇದೆ. ಆದರೆ, ಉಪನಗರ ರೈಲು ಯೋಜನೆ ನಿರ್ಮಾಣ ಕಾರ್ಯ ಹತ್ತು ವರ್ಷಗಳಿಂದ ತೆವಳುತ್ತಾ ಸಾಗಿದೆ. ಮೆಟ್ರೋ ರೈಲು ನಿರ್ಮಾಣ ಯೋಜನೆಯು ದೇಶದಲ್ಲೇ ಅತ್ಯಂತ ನಿಧಾನಗತಿಯ ಯೋಜನೆಯಾಗಿದೆ. ಫೆರಿಫೆರಲ್ ರಿಂಗ್ ರಸ್ತೆ ಯೋಜನೆ ಕನಸಾಗಿಯೇ ಉಳಿದಿದೆ. ಈ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ, ಸಹಕಾರ ಬೇಕಾಗಿತ್ತು. 

ಆದರೆ,   ಅನುದಾನ ನೀಡದೆ ನಿರ್ಲಕ್ಷ್ಯ ಮಾಡುತ್ತಿರುವ ಕಾರಣ ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿವೆ.ಪ್ರಚಾರದ ವೇಳೆ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಂದ ಸ್ಪಂದನೆ ಹೇಗಿದೆ?

ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಬಗ್ಗೆ ಉತ್ತಮ ಅಭಿಪ್ರಾಯವಿದೆ.

ಬೆಂಗಳೂರಿನ ಐಟಿ-ಬಿಟಿ ಕ್ಷೇತ್ರದ ಅಭಿವೃದ್ಧಿಗೆ ಸಂಸದರಾಗಿ ನೀವು ಯಾವ ರೀತಿ ಕೊಡುಗೆ ನೀಡಬಹುದು?

ಸಿಲಿಕಾನ್ ಸಿಟಿಯಾಗಿರುವ ಬೆಂಗಳೂರಿನಲ್ಲಿ ಐಟಿ-ಬಿಟಿ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಆದರೆ, ನಮ್ಮ ಸಂಸದರು ಅದನ್ನು ಬಳಸಿಕೊಳ್ಳಲು ವಿಫಲರಾಗಿದ್ದಾರೆ. ಬೆಂಗಳೂರು ನಗರಕ್ಕೆ ಬಂಡವಾಳ ಹೂಡಿಕೆ ಪ್ರಮಾಣ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.33ರಷ್ಟು ಕುಸಿತವಾಗಿದೆ. ಬಂಡವಾಳ ಹೂಡಿಕೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಬಂಡವಾಳ ಬಾರದಿದ್ದರೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ನಾನು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.ಚುನಾವಣೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ಬೀರುತ್ತಿದೆಯೇ?

ಪೆಟ್ರೋಲ್, ಡೀಸಲ್, ಗ್ಯಾಸ್ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಬೇಸತ್ತಿದ್ದಾರೆ. ಅದರ ಬಗ್ಗೆ ಒಂದು ವರ್ಗದ ಜನ ತಲೆ ಕೆಡಿಸಿಕೊಳ್ಳದೇ ಇರಬಹುದು. ಆದರೆ, ಬಾಧಿತರಾಗಿರುವ ವರ್ಗ ದೊಡ್ಡದಿದೆ. ಹೀಗಾಗಿ, ಬಡವರು, ಮಧ್ಯಮ ವರ್ಗದ ಪರವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲಿಸಲು ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಈ ಬೆಲೆ ಏರಿಕೆ ಬಿಸಿಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿವೆ.

ನಗರದ ಯಾವ ಸಮಸ್ಯೆಗೆ ಪ್ರಮುಖ್ಯತೆ ನೀಡಬೇಕು, ಪರಿಹಾರ ಒದಗಿಸಬೇಕು ಎಂದು ನಿಮಗನಿಸುತ್ತದೆ?

ದೇಶ ಅಭಿವೃದ್ಧಿಯಾಗಬೇಕು ಎಂದರೆ ಶಿಕ್ಷಣವೇ ಬುನಾದಿ. ಗುಣಮಟ್ಟದ ಶಿಕ್ಷಣಕ್ಕೆ ತುರ್ತಾಗಿ ಆದ್ಯತೆ ನೀಡಬೇಕಿದೆ. ಕೇಂದ್ರದಿಂದ ಸೂಕ್ತ ರೀತಿಯಲ್ಲಿ ಅನುದಾನ ಲಭ್ಯವಾಗಬೇಕು. ಹೀಗಾಗಿ, ಕೇಂದ್ರದ ಬಜೆಟ್‌ನಲ್ಲಿ ಶೇ.6ರಷ್ಟು ಅನುದಾನವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಹಾಲಿ ಕೇವಲ ಶೇ.2.4 ರಷ್ಟು ಮಾತ್ರ ಮೀಸಲಿಡಲಾಗಿದೆ. ಹೆಚ್ಚಿನ ಅನುದಾನ ಮೀಸಲಿಟ್ಟರೆ ಶಿಕ್ಷಕರ ನೇಮಕಾತಿ ಮತ್ತು ತರಬೇತಿ, ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಎಲ್ಲ ಸರ್ಕಾರಿ ಶಾಲೆಗಳನ್ನು ಕೇಂದ್ರಿಯ ವಿದ್ಯಾಲಯ ಮಾದರಿಯಲ್ಲಿ ಅಭಿವೃದ್ಧಿಪಡಿಸಬಹುದು.

ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿ ಯಾ‍ವ ಪರಿಣಾಮ ಬೀರಬಹುದು?

ಬೆಂಗಳೂರಿನಲ್ಲಿ ಜೆಡಿಎಸ್ ಅಸ್ತಿತ್ವದಲ್ಲಿ ಇಲ್ಲ. ಲೋಕಸಭಾ ಫಲಿತಾಂಶದ ಬಳಿಕ ಜೆಡಿಎಸ್ ಪಕ್ಷವಾಗಿಯೇ ಇರುವುದಿಲ್ಲ.ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ತಾರತಮ್ಯವಾಗಿದೆ ಎಂಬ ನಿಮ್ಮ ಆರೋಪ ಜನರನ್ನು ಮುಟ್ಟಿದೆಯೇ?

ರಾಜ್ಯದಲ್ಲಿ ತೀವ್ರ ಬರಗಾಲ ಇದೆ. ಬರದಿಂದ ಉಂಟಾಗಿರುವ ₹19 ಸಾವಿರ ಕೋಟಿ ನಷ್ಟ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಈ ಬಗ್ಗೆ ನಮ್ಮ ಸಂಸದರು ಧ್ವನಿ ಎತ್ತಿಲ್ಲ? ಈ ಬಗ್ಗೆ ಜನರಿಗೆ ಬೇಸರವಿದೆ. ನನಗೆ ಅವಕಾಶ ನೀಡಿದರೆ ಖಂಡಿತ ರಾಜ್ಯಕ್ಕಾಗಿ ಹೋರಾಡುತ್ತೇನೆ. ಕೇಂದ್ರದ ತಾರತಮ್ಯದಿಂದ ಜನರು ಬೇಸತ್ತಿದ್ದಾರೆ. ಚುನಾವಣೆ ಮೇಲೆ ಅದು ಖಂಡಿತ ಪರಿಣಾಮ ಬೀರುತ್ತದೆ.