ಕಾಲುವೆಗಳಿಗೆ ಪಂಪ್‌ಸೆಟ್‌ ಅಳವಡಿಕೆ ತಡೆಗೆ ಮಸೂದೆ: ಡಿಕೆಶಿ

| Published : Jul 17 2024, 12:54 AM IST

ಕಾಲುವೆಗಳಿಗೆ ಪಂಪ್‌ಸೆಟ್‌ ಅಳವಡಿಕೆ ತಡೆಗೆ ಮಸೂದೆ: ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆನಾಲ್‌ಗಳಿಗೆ ಪಂಪ್‌ಸೆಟ್‌ ಅಳವಡಿಸಿ ನೀರು ಎತ್ತುತ್ತಿರುವುದರಿಂದ ಯೋಜನೆಯ ಕೊನೆಯ ಭಾಗದ ಹಳ್ಳಿಗಳಿಗೆ ನೀರು ತಲುಪುತ್ತಿಲ್ಲ. ಇದನ್ನು ತಡೆಯಲು ಇದೇ ಅಧಿವೇಶನದಲ್ಲೇ ವಾರದೊಳಗೆ ಅಗತ್ಯ ಮಸೂದೆ ಮಂಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ವಿಧಾನಸಭೆರಾಜ್ಯದ ನೀರಾವರಿ ಯೋಜನೆಗಳಲ್ಲಿ ರೈತರು ಅಕ್ರಮವಾಗಿ ಕೆನಾಲ್‌ಗಳಿಗೆ ಪಂಪ್‌ಸೆಟ್‌ ಅಳವಡಿಸಿ ನೀರು ಎತ್ತುತ್ತಿರುವುದರಿಂದ ಯೋಜನೆಯ ಕೊನೆಯ ಭಾಗದ ಹಳ್ಳಿಗಳಿಗೆ ನೀರು ತಲುಪುತ್ತಿಲ್ಲ. ಇದನ್ನು ತಡೆಯಲು ಇದೇ ಅಧಿವೇಶನದಲ್ಲೇ ವಾರದೊಳಗೆ ಅಗತ್ಯ ಮಸೂದೆ ಮಂಡಿಸಲಾಗುವುದು ಎಂದು ಬೃಹತ್‌ ನೀರಾವರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸದನದಲ್ಲಿ ಮಂಗಳವಾರ ಪ್ರಶ್ನೋತ್ತರ ಕಲಾಪದ ವೇಳೆ ಜಮಖಂಡಿ ಸದಸ್ಯ ಜಗದೀಶ್‌ ಶಿವಣ್ಣ ಗುಡಗುಂಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಮಂಡ್ಯ, ಹಾಸನ, ಬಾಗಲಕೋಟೆ ಸೇರಿದಂತೆ ರಾಜ್ಯದ ನೀರಾವರಿ ಪ್ರದೇಶಗಳ ಕೊನೆಯ ಭಾಗಗಳಿಗೆ ನೀರು ತಲುಪುತ್ತಿಲ್ಲ. ಏತ ನೀರಾವರಿ ಮಾಡಿದರೂ ಸಹ ಶೇ.50 ರಷ್ಟು ನೀರು ಸಹ ಹೋಗುತ್ತಿಲ್ಲ. ಇದನ್ನು ತಡೆಯಲು ವಾರದೊಳಗೆ ಮಸೂದೆ ತಯಾರು ಮಾಡಿ ಮಂಡಿಸಲಾಗುವುದು. ಇದನ್ನು ಎಲ್ಲ ಸದಸ್ಯರೂ ಪರಾಮರ್ಶಿಸಿ ಒಪ್ಪಿಗೆ ನೀಡಿದರೆ ಜಾರಿಗೊಳಿಸಲಾಗುವುದು ಎಂದರು.

ನಾವು ನೀರನ್ನು ಏತ ನೀರಾವರಿ ಮೂಲಕ 40 ಕಿ.ಮೀ.ವರೆಗೆ ನೀರು ಹರಿಸುತ್ತೇವೆ. ಆ ನೀರನ್ನೇ ಕೆಲವೆಡೆ 10 ಕಿಮೀಗಟ್ಟಲೇ ಪಂಪ್‌ ಮಾಡುತ್ತಿದ್ದಾರೆ. ಯೋಜನೆ ಮಾಡಿ ಏನು ಲಾಭ? ಕೆಆರ್‌ಎಸ್‌ ನೀರು ಮಳವಳ್ಳಿಗೆ ಹೋಗುವುದೇ ಇಲ್ಲ. ಕಾಲುವೆ ಮಾಡಿ 20 ವರ್ಷಗಳಾದರೂ ಗದಗ ಜಿಲ್ಲೆ ನೀರನ್ನೇ ನೋಡಿಲ್ಲ. ಎಲ್ಲರೂ ಸಹಕಾರ ಕೊಟ್ಟರೇ ನಾವು ನೀರಿನ ರಕ್ಷಣೆ ಮಾಡಿ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತೆ ಮಾಡುವ ಕಾನೂನು ತರಲಾಗುವುದು ಎಂದರು. ಇದಕ್ಕೆ, ಬಿಜೆಪಿ ಸದಸ್ಯ ಸಿ.ಸಿ.ಪಾಟೀಲ್‌ ಸಹಮತ ವ್ಯಕ್ತಪಡಿಸಿ, ದಯವಿಟ್ಟು ಆದಷ್ಟು ಬೇಗ ವಿಧೇಯಕ ಸಿದ್ದಪಡಿಸಿ, ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.