ಸಾರಾಂಶ
ನೂತನ ಸಂಸತ್ ಭವನದ ಮೊದಲ ವಿಧೇಯಕವಾಗಿ ಮಹಿಳಾ ಮೀಸಲನ್ನು ಸದನ ಅಂಗೀಕರಿಸಿದ್ದರೂ ಪ್ರಾಯೋಗಿಕವಾಗಿ ಜಾರಿಯಾಗಿಲ್ಲ. ಆದರೆ ಒಡಿಶಾದಲ್ಲಿ ಬಿಜು ಜನತಾ ದಳ (ಬಿಜೆಡಿ) ಪಕ್ಷವು ಅದಕ್ಕೆ ಮುಂಚಿನಿಂದಲೂ ಈ ಪರಿಪಾಠವನ್ನು ಸ್ವಯಂಕೃತವಾಗಿ ಪಾಲಿಸಿಕೊಂಡು ಬಂದಿದೆ
ಭುವನೇಶ್ವರ: ನೂತನ ಸಂಸತ್ ಭವನದ ಮೊದಲ ವಿಧೇಯಕವಾಗಿ ಮಹಿಳಾ ಮೀಸಲನ್ನು ಸದನ ಅಂಗೀಕರಿಸಿದ್ದರೂ ಪ್ರಾಯೋಗಿಕವಾಗಿ ಜಾರಿಯಾಗಿಲ್ಲ. ಆದರೆ ಒಡಿಶಾದಲ್ಲಿ ಬಿಜು ಜನತಾ ದಳ (ಬಿಜೆಡಿ( ಪಕ್ಷವು ಅದಕ್ಕೆ ಮುಂಚಿನಿಂದಲೂ ಈ ಪರಿಪಾಠವನ್ನು ಸ್ವಯಂಕೃತವಾಗಿ ಪಾಲಿಸಿಕೊಂಡು ಬಂದಿದ್ದು, ಶೇ.33 ಮಹಿಳೆಯರಿಗೆ ತನ್ನ ಪಕ್ಷದಿಂದ ಟಿಕೆಟ್ ನೀಡುತ್ತಿದೆ.
ಅಂದರೆ ಈ ಸಲ ಒಡಿಶಾದಲ್ಲಿರುವ ಒಟ್ಟು 21 ಲೋಕಸಭಾ ಕ್ಷೇತ್ರಗಳ ಪೈಕಿ 7 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಡಿ ಮಹಿಳೆಯರಿಗೆ ಟಿಕೆಟ್ ನೀಡಿದೆ. ಅಂದಹಾಗೆ ಇದೇನು ಮೊದಲ ಬಾರಿಗೆ ನೀಡಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿಯೂ ಸಹ ಬಿಜೆಡಿ ಶೇ.33 (7) ಮಹಿಳೆಯರಿಗೆ ಟಿಕೆಟ್ ನೀಡಿ ಐವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.ಈ ಬಾರಿ ನೀಡಲಾದ 7 ಮಹಿಳೆಯರ ಪೈಕಿ ಐವರು ಪಕ್ಷಾಂತರಿಗಳಾಗಿದ್ದಾರೆ. ಅದರಲ್ಲೂ ಬಿಜೆಪಿಯಿಂದ ಬಿಜೆಡಿಗೆ ಬಂದ ಪರಿಣೀತ ಮಿಶ್ರಾ, ಲೇಖಶ್ರೀ ಮತ್ತು ಭೃಗು ಬಕ್ಷಿಪಾತ್ರ ಹಾಗೂ ಕಾಂಗ್ರೆಸ್‌ನಿಂದ ಬಂದಿರುವ ಅನ್ಶುಮಾನ್ ಮತ್ತು ಸುರೇಂದ್ರ ಸಿಂಗ್ ಭೋಯ್ ಅವರಿಗೆ ಬಿಜೆಡಿ ಮಣೆ ಹಾಕಿದೆ.
ಆದರೆ ಇದೇ ಸಂಸ್ಕೃತಿಯನ್ನು ಬಿಜೆಡಿ ವಿಧಾನಸಭಾ ಚುನಾವಣೆಯಲ್ಲಿ ಉಳಿಸಿಕೊಳ್ಳಲು ವಿಫಲವಾಗಿದೆ. ಒಡಿಶಾದ 147 ಕ್ಷೇತ್ರಗಳ ಪೈಕಿ ಬಿಜೆಡಿ ಇದುವರೆಗೂ 117 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಕೇವಲ 12 ಮಹಿಳೆಯರಿಗೆ (ಶೇ.10) ಮಾತ್ರ ಮಣೆ ಹಾಕಿದೆ.ಮಹಿಳಾ ಮೀಸಲು ಅಗತ್ಯವೇ?: ಮಹಿಳಾ ಮೀಸಲು ಕುರಿತಂತೆ ಇತ್ತೀಚೆಗೆ ಸಂಸತ್ತಿನಲ್ಲಿ ಶಾಸನ ಅಂಗೀಕರಿಸಲಾಗಿದೆ. ಆದರೆ ಇನ್ನೂ ಜಾರಿಗೆ ಬಂದಿಲ್ಲ. ಮತದಾರರ ಪೈಕಿ ಶೇ.50ರಷ್ಟು ಮಹಿಳೆಯರೇ ಇದ್ದರೂ ಅವರಿಗೆ ರಾಜಕೀಯ ಪಕ್ಷಗಳು ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ. ಆದರೆ ಪಂಚಾಯತಿ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸೂಕ್ತ ಮೀಸಲಾತಿ ವ್ಯವಸ್ಥೆಯಿದೆ.