ಬುರ್ಖಾಧಾರಿ ಮಹಿಳೆಯರಿಗೆ ಮುಖ ತೋರಿಸಿ ಎಂದ ಲತಾ!

| Published : May 14 2024, 01:10 AM IST / Updated: May 14 2024, 04:24 AM IST

ಸಾರಾಂಶ

ಹೈದರಾಬಾದ್‌ ಕ್ಷೇತ್ರದ ಬಿಜೆಪಿ ಫೈರ್‌ಬ್ರಾಂಡ್ ಅಭ್ಯರ್ಥಿ ಕೊಂಪೆಲ್ಲಾ ಮಾಧವಿ ಲತಾ ಅವರು ಮತಗಟ್ಟೆಯಲ್ಲಿ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ತೆಗೆದು ಮುಖ ತೋರಿಸುವಂತೆ ಕೇಳಿದ್ದು ಹಾಗೂ ಅವರ ಮುಖವನ್ನು ಮತದಾರರ ಗುರುತು ಚೀಟಿಯಲ್ಲಿನ ಚಿತ್ರಕ್ಕೆ ಹೋಲಿಸಿದ್ದು ವಿವಾದಕ್ಕೆ ಕಾರಣವಾಗಿದೆ.

 ಹೈದರಾಬಾದ್‌ :  ಹೈದರಾಬಾದ್‌ ಕ್ಷೇತ್ರದ ಬಿಜೆಪಿ ಫೈರ್‌ಬ್ರಾಂಡ್ ಅಭ್ಯರ್ಥಿ ಕೊಂಪೆಲ್ಲಾ ಮಾಧವಿ ಲತಾ ಅವರು ಮತಗಟ್ಟೆಯಲ್ಲಿ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ತೆಗೆದು ಮುಖ ತೋರಿಸುವಂತೆ ಕೇಳಿದ್ದು ಹಾಗೂ ಅವರ ಮುಖವನ್ನು ಮತದಾರರ ಗುರುತು ಚೀಟಿಯಲ್ಲಿನ ಚಿತ್ರಕ್ಕೆ ಹೋಲಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಮಾಧವಿ ಲತಾ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ಮಾಧವಿ ಲತಾ ಅವರು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಿರುದ್ಧ ಸ್ಪರ್ಧಿಸಿ ಸುದ್ದಿಯಲ್ಲಿದ್ದಾರೆ. ಮತದಾನದ ನಿಮಿತ್ತ ಸೋಮವಾರ ಮಲಕ್‌ಪೇಟೆಯಲ್ಲಿನ ಮತಗಟ್ಟೆಗೆ ತೆರಳಿ ಅಲ್ಲಿದ್ದ ಬುರ್ಖಾಧಾರಿ ಮತದಾರರನ್ನು ಪ್ರಶ್ನಿಸಿದ್ದಾರೆ. ಬುರ್ಖಾ (ಬುರ್ಖಾದ ಮುಖಗವಸು) ಎತ್ತಿ ಮುಖ ತೋರಿಸಿ ಎಂದು ಮಾಧವಿ ಹೇಳುತ್ತಿರುವುದು ಹಾಗೂ ಅವರ ಗುರುತು ಚೀಟಿಯಲ್ಲಿನ ಫೋಟೋಗೂ ಮುಖಕ್ಕೂ ಹೊಂದಾಣಿಕೆ ಆಗುತ್ತಾ ಎಂದು ಗಮನಿಸುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ.‘ಗುರುತನ್ನು ಪರಿಶೀಲಿಸಲು ಯಾರೊಬ್ಬರ ಮುಸುಕನ್ನು ಎತ್ತುವ ಹಕ್ಕು ಯಾವುದೇ ಅಭ್ಯರ್ಥಿಗೆ ಇಲ್ಲ’ ಎಂದು ಆರೋಪಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ‘ಅನುಮಾನವಿದ್ದಲ್ಲಿ, ಅಭ್ಯರ್ಥಿಗಳು ಮತದಾರರ ಗುರುತನ್ನು ಪರಿಶೀಲಿಸಲು ಚುನಾವಣಾಧಿಕಾರಿಯನ್ನು ಕೋರಬಹುದು. ನೇರವಾಗಿ ಅಭ್ಯರ್ಥಿಗೇ ಅಂಥ ಅಧಿಕಾರವಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ, ಅಭ್ಯರ್ಥಿಗೆ ಮತದಾರರ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕುಇದೆ ಎಂದು ಲತಾ ಪ್ರತಿಪಾದಿಸಿದ್ದಾರೆ. ‘ನಾನು ಅಭ್ಯರ್ಥಿ. ಕಾನೂನಿನ ಪ್ರಕಾರ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕು ಅಭ್ಯರ್ಥಿಗೆ ಇದೆ. ನಾನು ಪುರುಷ ಅಲ್ಲ, ನಾನು ಮಹಿಳೆ. ಆದ್ದರಿಂದಲೇ ಮಹಿಳಾ ಮತದಾರರಿಗೆ ತುಂಬಾ ನಮ್ರತೆಯಿಂದ ನಾನು ವಿನಂತಿಸಿದೆ. ಅದಕ್ಕೆ ಅವರೂ ಸ್ಪಂದಿಸಿದರು. ಅದನ್ನೇ ದೊಡ್ಡದು ಮಾಡಿರುವುದು ಸಲ್ಲದು’ ಎಂದಿದ್ದಾರೆ.

ಈ ಘಟನೆ ಬಗ್ಗೆ ಓವೈಸಿ ಇನ್ನೂ ಪ್ರತಿಕ್ರಿಯಿಸಿಲ್ಲ, ಆದರೆ ವೈರಲ್ ವೀಡಿಯೊವನ್ನು ತಮ್ಮ ಟ್ವಿಟರ್ ಟೈಮ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.