ಸಾರಾಂಶ
ನವದೆಹಲಿ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ಬಳಿಕ ತಮಿಳುನಾಡಲ್ಲಿ ಸೃಷ್ಟಿಯಾಗಿದ್ದ ಹಿಂದುತ್ವದ ಶೂನ್ಯತೆಯನ್ನು ಬಿಜೆಪಿ ತುಂಬುತ್ತಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅಣ್ಣಾಮಲೈ, ‘ಜಯಲಲಿತಾ ಬದುಕಿರುವವರೆಗೂ ಅವರು ತಮಿಳುನಾಡಿನಲ್ಲಿ ಎಲ್ಲರಿಗಿಂತ ಶ್ರೇಷ್ಠ ಹಿಂದುತ್ವದ ನಾಯಕಿಯಾಗಿದ್ದರು.
ಎಐಎಡಿಎಂಕೆ ಪಕ್ಷವು ಜಯಲಲಿತಾ ನಿಧನದ ಬಳಿಕ ಹಿಂದುತ್ವ ಸಿದ್ಧಾಂತದಿಂದ ಹಿಂದೆ ಸರಿಯುತ್ತಿದೆ 2014ಕ್ಕೂ ಮುನ್ನ ಬಿಜೆಪಿ ರೀತಿಯಲ್ಲಿಯೇ ಜಯಲಲಿತಾ ತಮ್ಮ ಹಿಂದೂ ಸಿದ್ಧಾಂತವನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದರು.
ಹೀಗಾಗಿ ಹಿಂದೂ ಮತದಾರರು ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ 2016ರಲ್ಲಿ ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ನಿಷೇಧಿತ ಪಿಎಫ್‌ಐ ಮುಖವಾಣಿ ಎಸ್‌ಡಿಪಿಐನೊಂದಿಗೆ ಕೈ ಜೋಡಿಸಿತು. ಜಯಲಲಿತಾರಿಂದ ಎಐಎಡಿಎಂಕೆ ಬಹಳ ದೂರ ಸರಿದಿದೆ. ಹೀಗಾಗಿ ಹಿಂದೂಗಳು ಮೊದಲ ಬಾರಿಗೆ ದೇವಾಲಯಗಳನ್ನು ರಕ್ಷಿಸುವ ಪಕ್ಷವನ್ನು ಎದುರು ನೋಡುತ್ತಿದೆ. ಸ್ವಾಭಾವಿಕವಾಗಿ ಅದು ಬಿಜೆಪಿ ಆಗಿರಲಿದೆ’ ಎಂದರು.