ಬಿಜೆಪಿ ಸಂಘಟನೆ ಪ್ರಧಾನ ಕಾರ್‍ಯದರ್ಶಿ ರಾಜೇಶ್‌ಗೆ ಕೊಕ್‌

| Published : May 26 2024, 01:36 AM IST / Updated: May 26 2024, 04:22 AM IST

ಬಿಜೆಪಿ ಸಂಘಟನೆ ಪ್ರಧಾನ ಕಾರ್‍ಯದರ್ಶಿ ರಾಜೇಶ್‌ಗೆ ಕೊಕ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ತನ್ನ ಪಕ್ಷ ಸಂಘಟನಾ ವಿಭಾಗದಲ್ಲಿ ಕೆಲವೊಂದನ್ನು ಬದಲಾವಣೆ ಮಾಡಿದೆ. ಅದರಂತೆ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಜಿ.ವಿ.ರಾಜೇಶ್‌ ಅವರನ್ನು ಕೈಬಿಡಲಾಗಿದೆ.

 ಬೆಂಗಳೂರು :  ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ತನ್ನ ಪಕ್ಷ ಸಂಘಟನಾ ವಿಭಾಗದಲ್ಲಿ ಕೆಲವೊಂದನ್ನು ಬದಲಾವಣೆ ಮಾಡಿದೆ. ಅದರಂತೆ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಜಿ.ವಿ.ರಾಜೇಶ್‌ ಅವರನ್ನು ಕೈಬಿಡಲಾಗಿದೆ.

ಬಿಜೆಪಿ ವರಿಷ್ಠರು ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲಿಯೇ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹೊಸದಾಗಿ ನೇಮಕ ಮಾಡಿಕೊಳ್ಳಲಾಗುವುದು. ಜಿ.ವಿ.ರಾಜೇಶ್‌ ಕಳೆದ ಎರಡು ವರ್ಷಗಳಿಂದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಆ ಹುದ್ದೆಯಿಂದ ಕೈಬಿಟ್ಟಿರುವುದರಿಂದ ಅವರನ್ನು ಆರ್‌ಎಸ್‌ಎಸ್‌ಗೆ ವಾಪಸ್‌ ಕರೆಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

ಬಿಜೆಪಿಯಲ್ಲಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಯು ಅತ್ಯಂತ ಮಹತ್ವದ್ದಾಗಿದೆ. ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡುವೆ ಸಮನ್ವಯ ಸಾಧಿಸುವಲ್ಲಿ ಕಾರ್ಯಪ್ರವೃತ್ತರಾಗಿರುತ್ತಾರೆ.

ಜಿ.ವಿ.ರಾಜೇಶ್‌ ಅವರು 2022ರ ಜುಲೈ ತಿಂಗಳಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದರು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ವೇಳೆ ಅವರು ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಅವಧಿಯಲ್ಲಿ ರಾಜೇಶ್‌ ಅವರನ್ನು ನೇಮಕ ಮಾಡಲಾಗಿತ್ತು. ಪಕ್ಷದ ಜವಾಬ್ದಾರಿಯನ್ನು ಬಿ.ವೈ.ವಿಜಯೇಂದ್ರ ಅವರು ತೆಗೆದುಕೊಂಡ ಬಳಿಕ ಹಲವು ಹುದ್ದೆಗಳಿಗೆ ಹೊಸದಾಗಿ ನೇಮಕ ಮಾಡಲಾಗಿತ್ತು. ಇದೀಗ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಗೂ ಹೊಸದಾಗಿ ನೇಮಕ ಮಾಡಲಾಗುತ್ತದೆ.