ಸಾರಾಂಶ
ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕೀಯದ ವಿಚಾರದಲ್ಲಿ ಹೈಕಮಾಂಡ್ ಕೊನೆಗೂ ಮಧ್ಯೆ ಪ್ರವೇಶಿಸಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದೆ.
ಈ ನೋಟಿಸ್ ತಲುಪಿದ ಹತ್ತು ದಿನಗಳೊಳಗಾಗಿ ಉತ್ತರ ನೀಡಬೇಕು, ನಿಗದಿತ ಅವಧಿಯೊಳಗೆ ಉತ್ತರ ನೀಡದಿದ್ದರೆ ನಿಮ್ಮಿಂದ ಯಾವುದೇ ಉತ್ತರ ಬಂದಿಲ್ಲವೆಂದು ಪರಿಗಣಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಸ್ತು ಕ್ರಮದ ಎಚ್ಚರಿಕೆ ಕೊಟ್ಟಿದೆ. ಭಾನುವಾರ ಬಿಜೆಪಿಯ ಕೇಂದ್ರೀಯ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶುಕ್ರವಾರ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಯತ್ನಾ ಅವರು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದರಿಂದ ಪಕ್ಷ ಸಂಘಟನೆಗೆ ಮತ್ತು ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತಿದೆ ಎಂಬುದನ್ನು ವಿವರಿಸಿದ್ದರು. ಅದರ ಬೆನ್ನಲ್ಲೇ ಭಾನುವಾರ ನೋಟಿಸಿನ ಅಸ್ತ್ರ ಪ್ರಯೋಗವಾಗಿದೆ.
ನೋಟಿಸ್‌ನಲ್ಲಿ ಏನಿದೆ?:
ರಾಜ್ಯಮಟ್ಟದ ನಾಯಕತ್ವದ ವಿರುದ್ಧ ನಿಮ್ಮ ನಿರಂತರ ವಾಗ್ದಾಳಿಗಳು ಭಾರತೀಯ ಜನತಾ ಪಕ್ಷದ ನಿರ್ದೇಶನಗಳಿಗೆ ವಿರುದ್ಧವಾಗಿವೆ. ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳು ಮತ್ತು ನಿಲುವುಗಳು ಪಕ್ಷದ ಮೂಲತತ್ವಗಳಿಗೆ ಧಕ್ಕೆ ಉಂಟು ಮಾಡುತ್ತಿವೆ. ರಾಜಕೀಯ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ನಿಮ್ಮ ಮಾತುಗಳ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಬೇರೆ ಬೇರೆ ಪಕ್ಷಗಳ ವಲಯಗಳಲ್ಲಿ ಚರ್ಚೆಯಾಗುತ್ತಿದೆ.
ಈ ಹಿಂದೆ ಅನೇಕ ಬಾರಿ ನಿಮಗೆ ಶೋಕಾಸ್ ನೋಟಿಸ್ ನೀಡಿದಾಗ ವರ್ತನೆ ಸರಿಪಡಿಸಿಕೊಳ್ಳುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದ್ದು, ಅಶಿಸ್ತನ್ನು ಮುಂದುವರೆಸಿರುವುದು ತುಂಬಾ ಕಳವಳಕಾರಿಯಾಗಿದೆ. ಸುದೀರ್ಘ ಅವಧಿಯಿಂದ ಪಕ್ಷದಲ್ಲಿರುವುದು ಮತ್ತು ಹಿರಿತನದ ಕಾರಣ ಕೇಂದ್ರೀಯ ಶಿಸ್ತು ಸಮಿತಿಯು ಈ ಹಿಂದೆ ನೀವು ನೀಡಿದ ಉತ್ತರಗಳನ್ನು ಸ್ವೀಕರಿಸಿ ಮೃದು ಧೋರಣೆ ಅನುಸರಿಸಿತ್ತು.
ಪಕ್ಷದ ನಾಯಕರ ವಿರುದ್ಧ ನೀವು ಮಾಡಿರುವ ತಪ್ಪು ಆರೋಪಗಳು ಮತ್ತು ಹೇಳಿಕೆಗಳು ಪಕ್ಷದ ಅಧಿಕೃತ ನಿಲುವುಗಳಿಗೆ ತದ್ವಿರುದ್ಧವಾಗಿವೆ. ಇದು ಬಿಜೆಪಿ ಪಕ್ಷದ ನಿಯಮಗಳ ಆರ್ಟಿಕಲ್ 25ರ ಪ್ರಕಾರ ಶಿಸ್ತು ಉಲ್ಲಂಘನೆ ಆಗುತ್ತದೆ. ಹೀಗಾಗಿ, ನಿಮ್ಮ ವಿರುದ್ಧ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳಬಾರದೇಕೆ ಎಂಬುದನ್ನು ನೋಟಿಸ್ ತಲುಪಿದ ಹತ್ತು ದಿನಗಳ ಒಳಗೆ ಉತ್ತರಿಸಬೇಕು. ನಿಗದಿತ ಅವಧಿಯೊಳಗೆ ಉತ್ತರ ನೀಡದಿದ್ದರೆ, ನಿಮ್ಮಿಂದ ಯಾವುದೇ ಉತ್ತರ ಇಲ್ಲವೆಂದು ಪರಿಗಣಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ಉತ್ತರಿಸಲು 10 ದಿನ ಬೇಡ: ಯತ್ನಾಳ್
ಬಿಜೆಪಿ ಶಿಸ್ತು ಸಮಿತಿಯ ಅಧ್ಯಕ್ಷರು ನೀಡಿರುವ ನೋಟಿಸ್‌ಗೆ ಉತ್ತರ ನೀಡುವೆ. ನನಗೆ 10 ದಿನದ ಗಡುವು ಬೇಡ. ನನ್ನ ಬಳಿ ಉತ್ತರ ಸಿದ್ಧವಾಗಿದೆ. ನಾನು ಎವರಿಡೇ ಬ್ಯಾಟರಿ ಇದ್ದ ಹಾಗೆ. ಆನ್ ಮಾಡಿದಾಕ್ಷಣ ಚಾಲೂ ಆಗುತ್ತೆ. ಹಿಂದುತ್ವದ ಪರ, ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟ, ವಕ್ಫ್ ಸಂಬಂಧಿತ ಸಮಸ್ಯೆಗಳನ್ನು ಸಮಿತಿಯ ಗಮನಕ್ಕೆ ತರುವೆ. ಕರ್ನಾಟಕದಲ್ಲಿ ಬಿಜೆಪಿಯ ಪ್ರಸ್ತುತ ಸ್ಥಿತಿ ಬಗ್ಗೆ ವಾಸ್ತವಾಂಶ ಪ್ರಸ್ತುತಪಡಿಸುತ್ತೇನೆ. ವಂಶವಾಹಿ ರಾಜಕೀಯ ವಿರುದ್ಧ ನನ್ನ ಬದ್ಧತೆ ಅಚಲವಾಗಿ ಉಳಿಯುತ್ತದೆ.-
ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ಶಾಸಕ
ನೋಟಿಸ್‌ನಲ್ಲೇನಿದೆ?
ರಾಜ್ಯ ನಾಯಕತ್ವದ ವಿರುದ್ಧದ ನಿಮ್ಮ ವಾಗ್ದಾಳಿ ಬಿಜೆಪಿ ನಿರ್ದೇಶನಕ್ಕೆ ವಿರುದ್ಧವಾಗಿದೆ
ನಿಮ್ಮ ಹೇಳಿಕೆ ಪಕ್ಷದ ತತ್ವಗಳಿಗೆ ಧಕ್ಕೆ ತರುತ್ತಿದೆ, ಬೇರೆ ಪಕ್ಷಗಳ ಚರ್ಚೆ ವಸ್ತುವಾಗುತ್ತಿದೆವರ್ತನೆ ಸರಿಪಡಿಸಿಕೊಳ್ಳುವುದಾಗಿ ಈ ಹಿಂದೆ ನೀವು ನೀಡಿದ್ದ ಭರವಸೆಗಳು ಹುಸಿಯಾಗಿವೆ
ಎಚ್ಚರಿಕೆಯ ಹೊರತಾಗಿಯೂ ಅಶಿಸ್ತಿನ ವರ್ತನೆ ಮುಂದುವರೆಸಿರುವುದು ಕಳವಳಕಾರಿ
ಶಿಸ್ತು ಉಲ್ಲಂಘಿಸಿದ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದೆಂದು 10 ದಿನದಲ್ಲಿ ಉತ್ತರಿಸಿ
10 ದಿನದಲ್ಲಿ ಪ್ರತಿಕ್ರಿಯೆ ಕೊಡದಿದ್ದರೆ ಉತ್ತರವಿಲ್ಲ ಎಂದು ಪರಿಗಣಿಸಿ ಮುಂದಿನ ತೀರ್ಮಾನ