ತೇಜಸ್ವಿ ಸೂರ್ಯ ಗೆಲುವಿಗೆ ಶ್ರಮಿಸಲು ಬಿಜೆಪಿ-ಜೆಡಿಎಸ್‌ ಕಾರ್ಯಕರ್ತ ಪಣ

| Published : Mar 28 2024, 01:31 AM IST / Updated: Mar 28 2024, 09:02 AM IST

ತೇಜಸ್ವಿ ಸೂರ್ಯ ಗೆಲುವಿಗೆ ಶ್ರಮಿಸಲು ಬಿಜೆಪಿ-ಜೆಡಿಎಸ್‌ ಕಾರ್ಯಕರ್ತ ಪಣ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯೊಂದಿಗೆ ಕಣಕ್ಕಿಳಿದಿರುವ ಬಿಜೆಪಿ-ಜೆಡಿಎಸ್‌ ತನ್ನ ಅಭ್ಯರ್ಥಿಗಳ ಗೆಲುವಿಗಾಗಿ ರೂಪಿಸಿಕೊಂಡಿರುವ ಸಮನ್ವಯ ಸಮಿತಿಯ ಮೊದಲ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯೊಂದಿಗೆ ಕಣಕ್ಕಿಳಿದಿರುವ ಬಿಜೆಪಿ-ಜೆಡಿಎಸ್‌ ತನ್ನ ಅಭ್ಯರ್ಥಿಗಳ ಗೆಲುವಿಗಾಗಿ ರೂಪಿಸಿಕೊಂಡಿರುವ ಸಮನ್ವಯ ಸಮಿತಿಯ ಮೊದಲ ಸಭೆ ನಡೆಯಿತು.

ಬುಧವಾರ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಮತ್ತು ಜೆಡಿಎಸ್‌ನ ಬೆಂಗಳೂರು ಮಹಾನಗರ ಘಟಕದ ಸಮನ್ವಯ ಸಮಿತಿಯಲ್ಲಿ ಪರಸ್ಪರ ಹೊಂದಾಣಿಕೆಯೊಂದಿಗೆ ಪ್ರಚಾರ ಕೈಗೊಳ್ಳುವ ಕುರಿತು ಚರ್ಚೆ ನಡೆಸಲಾಯಿತು. ಇದೇ ಮೊದಲ ಬಾರಿಗೆ ಬಿಜೆಪಿಯ ನಾಯಕರು ಜೆಡಿಎಸ್ ಕಚೇರಿಗೆ ಆಗಮಿಸಿದ್ದು, ಜೆಡಿಎಸ್‌ನ ಶಾಲು ಹಾಕಿಕೊಂಡಿದ್ದರು.

ಬಿಜೆಪಿ-ಜೆಡಿಎಸ್‌ನ ನಾಯಕರು, ಕಾರ್ಯಕರ್ತರು ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೊಂದಾಣಿಕೆ ಮಾಡಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ. 

ಪ್ರಚಾರದ ವೇಳೆ ಜಂಟಿಯಾಗಿ ಕೆಲಸ ಮಾಡಬೇಕು. ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿ ಸೂರ್ಯ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವ ಅಶ್ವಾಸನೆಯನ್ನು ಸಭೆಯಲ್ಲಿ ನೀಡಲಾಯಿತು. 

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ದೇಶದ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸವನ್ನು ಮಾಡಬೇಕು ಎಂದು ಉಭಯ ಪಕ್ಷಗಳ ಕಾರ್ಯಕರ್ತರಿಗೆ ಕರೆ ನೀಡಲಾಯಿತು.

ಸಭೆಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಕಳೆದ ವಿಧಾಸಭೆ ಚುನಾವಣೆಯಲ್ಲಿಯೇ ಜೆಡಿಎಸ್-ಬಿಜೆಪಿ ನಡುವೆ ಮೈತ್ರಿ ಆಗಬೇಕಿತ್ತು. ಆಗ ಎರಡೂ ಪಕ್ಷಗಳ ನಡುವೆ ಮೈತ್ರಿ ಆಗದ ಕಾರಣ ರಾಜ್ಯಕ್ಕೆ ಬಹುದೊಡ್ಡ ನಷ್ಟವಾಗಿದೆ. 

ಕಾಂಗ್ರೆಸ್ ದುರಾಡಳಿತ ಎಷ್ಟರಮಟ್ಟಿಗೆ ಕರ್ನಾಟಕವನ್ನು ಬಾಧಿಸುತ್ತಿದೆ ಎಂದರೆ, ಕಳೆದ 10 ತಿಂಗಳಲ್ಲಿ ರಾಜ್ಯ ಆರ್ಥಿಕ ದಿವಾಳಿತನದತ್ತ ದಾಪುಗಾಲಿಟ್ಟಿದೆ. 

ಪ್ರಗತಿಯತ್ತ ದಾಪುಗಾಲು ಇಡಬೇಕಿದ್ದ ಕರ್ನಾಟಕ ಕಾಂಗ್ರೆಸ್ಸಿನ ಕೆಟ್ಟ ಆಡಳಿದಿಂದ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.

ರಸ್ತೆ, ಚರಂಡಿ ರಿಪೇರಿ ಸೇರಿದಂತೆ ಸಣ್ಣಪುಟ್ಟ ಕಾಮಗಾರಿ ನಡೆಸುವುದಕ್ಕೂ ಶಾಸಕರಿಗೆ ಹಣ ನೀಡುತ್ತಿಲ್ಲ ಈ ಸರಕಾರ. ತಮ್ಮ ಕ್ಷೇತ್ರಗಳಲ್ಲಿ ಅವರು ಮುಖ ತೋರಿಸಲೂ ಆಗುತ್ತಿಲ್ಲ. 

ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ವೈಫಲ್ಯಗಳನ್ನು ಜನತೆಗೆ ತಿಳಿಸಬೇಕು ಹಾಗೂ ನಮ್ಮ ಮೈತ್ರಿಯ ಬಗ್ಗೆ ಮನದಟ್ಟು ಮಾಡಿಕೊಡಬೇಕು ಎಂದರು.

ಸಭೆಯಲ್ಲಿ ಬೆಂ.ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಕೆ.ರಾಮಮೂರ್ತಿ, ಜೆಡಿಎಸ್ ಬೆಂಗಳೂರು ಘಟಕದ ಅಧ್ಯಕ್ಷ ರಮೇಶ್ ಗೌಡ, ವಿಧಾನಪರಿಷತ್ ಸದಸ್ಯ ಶರವಣ ಇತರರು ಉಪಸ್ಥಿತರಿದ್ದರು.