ಬಿಜೆಪಿ-ಜೆಡಿಎಸ್ ಮೈತ್ರಿ ಎರಡೂ ಪಕ್ಷಗಳಲ್ಲೂ ಒಲವಿಲ್ಲ
KannadaprabhaNewsNetwork | Published : Oct 19 2023, 12:45 AM IST
ಬಿಜೆಪಿ-ಜೆಡಿಎಸ್ ಮೈತ್ರಿ ಎರಡೂ ಪಕ್ಷಗಳಲ್ಲೂ ಒಲವಿಲ್ಲ
ಸಾರಾಂಶ
ಬಿಜೆಪಿ-ಜೆಡಿಎಸ್ ಮೈತ್ರಿ ಎರಡೂ ಪಕ್ಷಗಳಲ್ಲೂ ಒಲವಿಲ್ಲ
- ಬಲವಂತದ ಮೈತ್ರಿ ಹೇರಿಕೆಗೆ ಕಾರ್ಯಕರ್ತರಲ್ಲಿ ಬೇಸರ - ಕ್ಷೇತ್ರ ಬಿಟ್ಟುಕೊಡುವ ವಿಚಾರದಲ್ಲೂ ಪ್ರತಿಷ್ಠೆಯ ಸಮರ ವಿಶೇಷ ವರದಿ ಕನ್ನಡಪ್ರಭ ವಾರ್ತೆ ಮಂಡ್ಯ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿರುವುದು ಎರಡೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಇಷ್ಟವಿಲ್ಲ. ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಮಟ್ಟದಲ್ಲಿ ನಡೆದಿರುವ ಮೈತ್ರಿಯನ್ನು ಬಲವಂತವಾಗಿ ಸ್ಥಳೀಯ ಮಟ್ಟದಲ್ಲಿ ಹೇರಲಾಗುತ್ತಿದೆ ಎಂಬ ಭಾವ ವ್ಯಕ್ತವಾಗುತ್ತಿದೆ. ಇದು ಸ್ಥಳೀಯವಾಗಿ ಉಭಯ ಪಕ್ಷದವರಲ್ಲಿ ಬೇಸರ ಉಂಟುಮಾಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾದಾಗಲೂ ಸ್ಥಳೀಯ ಕಾಂಗ್ರೆಸ್ಸಿಗರು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಲಿಲ್ಲ. ಮೈತ್ರಿ ವಿಚಾರದಲ್ಲಿ ಸ್ಥಳೀಯ ಮುಖಂಡರು-ಕಾರ್ಯಕರ್ತರನ್ನು ಕಡೆಗಣಿಸಿದ್ದರಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಗೆಲುವು ಸುಲಭವಾಯಿತು. ಅಂದು ಬಿಜೆಪಿಯನ್ನು ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾ ಅವರನ್ನು ಬೆಂಬಲಿಸಿತ್ತು. ರಾಜಕೀಯ ಪರಿಸ್ಥಿತಿ ಅದಲು-ಬದಲು: ೨೦೨೪ರ ಚುನಾವಣೆಗೆ ಈ ರಾಜಕೀಯ ಪರಿಸ್ಥಿತಿ ಅದಲು ಬದಲಾಗಿದೆ. ಅಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಈಗ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಜೋಡೆತ್ತುಗಳಾಗಿ ಚುನಾವಣೆ ಎದುರಿಸುವುದರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಲು ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ. ಅಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದ ಸಂಸದೆ ಸುಮಲತಾ ಅವರನ್ನು ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯನ್ನಾಗಿ ಮಾಡುವುದಕ್ಕೆ ಬಿಜೆಪಿ ಹೈಕಮಾಂಡ್ ಹಂತದಲ್ಲಿ ಚಿಂತನೆ ನಡೆದಿದೆ. ಎರಡೂ ಪಕ್ಷದವರೂ ಒಗ್ಗೂಡುತ್ತಿಲ್ಲ: ಜೆಡಿಎಸ್ ವರಿಷ್ಠರು ಬಿಜೆಪಿ ರಾಷ್ಟ್ರೀಯ ನಾಯಕರ ಮಟ್ಟದಲ್ಲಿ ಮೈತ್ರಿಯಾಗಿದ್ದರೂ ಸ್ಥಳೀಯವಾಗಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಒಗ್ಗೂಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದುವರೆಗೂ ಕಾವೇರಿ ಚಳವಳಿಯಲ್ಲಾಗಲೀ, ಸರ್ಕಾರದ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಾಗಲೀ, ಅನಧಿಕೃತ ಲೋಡ್‌ಶೆಡ್ಡಿಂಗ್ ವಿಷಯದಲ್ಲಾಗಲೀ ಅಥವಾ ಇನ್ಯಾವುದೇ ವಿಷಯದಲ್ಲೂ ಜೆಡಿಎಸ್-ಬಿಜೆಪಿ ಒಗ್ಗೂಡಿ ಹೋರಾಟ ನಡೆಸಿದ ನಿದರ್ಶನಗಳೇ ಇಲ್ಲವಾಗಿದೆ. ಜೆಡಿಎಸ್ ಪ್ರಾಬಲ್ಯವೇ ಹೆಚ್ಚು: ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವು ಸಾಧಿಸಿತ್ತು. ಆದರೂ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಜೆಡಿಎಸ್‌ನ ಕುಟುಂಬ ರಾಜಕಾರಣಕ್ಕೆ ಬೇಸತ್ತು ಅಂದು ಜಿಲ್ಲೆಯ ಜನರು ನಿಖಿಲ್ ಅವರನ್ನು ಸೋಲಿಸಿದ್ದರು. ಜಿಲ್ಲೆಯಲ್ಲಿ ಈಗಲೂ ಜೆಡಿಎಸ್‌ಗೆ ತನ್ನದೇ ಆದ ಓಟ್ ಬ್ಯಾಂಕ್ ಇದೆ. ಬಿಜೆಪಿಗಿಂತಲೂ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಒಗ್ಗಟ್ಟಿನಿಂದ ಹೋರಾಟಕ್ಕಿಳಿದರೆ ಗೆಲುವು ಸಾಧ್ಯವಾಗಲಿದೆ. ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಸೋಲುಂಡಿದ್ದ ಕಾಂಗ್ರೆಸ್ ಮತ್ತೆ ಮೈಕೊಡವಿ ಮೇಲೆದ್ದ ರೀತಿಯಲ್ಲೇ ಸಂಘಟನೆಗೆ ಶಕ್ತಿ ತುಂಬಿದರೆ ಲೋಕಸಭೆಯನ್ನು ಗೆಲ್ಲಬಹುದು ಎಂಬ ಅಭಿಪ್ರಾಯ ಜೆಡಿಎಸ್‌ನವರದ್ದಾಗಿದೆ. ಹೊಂದಾಣಿಕೆ ಅಗತ್ಯವಿಲ್ಲ: ಬಿಜೆಪಿಗೆ ಜಿಲ್ಲೆಯೊಳಗೆ ಅಲ್ಪ ಪ್ರಮಾಣದಲ್ಲಿ ಮತಗಳು ಹೆಚ್ಚಾಗಿರಬಹುದು. ಆದರೆ, ಕಾಂಗ್ರೆಸ್‌ಗೆ ಸರಿಸಮನಾಗಿ ಪೈಪೋಟಿ ನೀಡುವ ಸಾಮರ್ಥ್ಯವಿರುವುದು ಇಂದಿಗೂ ಜೆಡಿಎಸ್‌ಗೆ ಮಾತ್ರ. ಅದು ಕಳೆದ ಚುನಾವಣೆಯಲ್ಲೂ ಸಾಬೀತಾಗಿದೆ. ಹೀಗಿರುವಾಗ ಮೈತ್ರಿಯ ಅವಶ್ಯಕತೆ ಇರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನೇ ಹಾಕದೆ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾದವರೊಂದಿಗೆ ಹೊಂದಾಣಿಕೆ ಎಷ್ಟರಮಟ್ಟಿಗೆ ಸರಿ ಎನ್ನುವುದು ಮುಖಂಡರು, ಕಾರ್ಯಕರ್ತರ ಪ್ರಶ್ನೆಯಾಗಿದೆ. ಕ್ಷೇತ್ರ ಬಿಟ್ಟುಕೊಡಬೇಡಿ: ಜೆಡಿಎಸ್ ಪಕ್ಷದಲ್ಲಿ ಸಂಘಟನೆ ಪ್ರಬಲವಾಗಿದೆ. ಆದರೆ, ಲೋಕಸಭೆ ಕ್ಷೇತ್ರವನ್ನು ಗೆಲ್ಲುವ ಅಭ್ಯರ್ಥಿಗೆ ಹುಡುಕಾಟ ಅಲ್ಲಿಯೂ ನಡೆದಿದೆ. ವರಿಷ್ಠರ ಮಟ್ಟದಲ್ಲಿ ಮೈತ್ರಿ ಬಗ್ಗೆ ಚರ್ಚೆಯಾಗಿರುವುದು ಹೊರತು ಪಡಿಸಿದರೆ ಕ್ಷೇತ್ರ ಹಂಚಿಕೆ ಇನ್ನೂ ಫೈನಲ್ ಆಗಿಲ್ಲ. ಭವಿಷ್ಯದ ರಾಜಕೀಯ ದೃಷ್ಟಿಯಿಂದ ಜೆಡಿಎಸ್ ಜಿಲ್ಲೆಯೊಳಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ. ಅದಕ್ಕಾಗಿ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳುವುದಕ್ಕೆ ಹೋರಾಟ ನಡೆಸುತ್ತಿದೆ. ಸ್ಥಳೀಯ ನಾಯಕರು, ಮುಖಂಡರು, ಕಾರ್ಯಕರ್ತರು ಜೆಡಿಎಸ್ ವರಿಷ್ಠರಿಗೆ ಕ್ಷೇತ್ರವನ್ನು ಉಳಿಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಜಿಲ್ಲೆಯೊಳಗೆ ಲೋಕಸಭೆಗೆ ಸ್ಪರ್ಧಿಸಿ ಗೆಲ್ಲುವ ಸಮರ್ಥ ಅಭ್ಯರ್ಥಿಗಳಿದ್ದಾರೆ. ಇಲ್ಲದಿದ್ದರೆ ಹೊಸಮುಖವನ್ನು ಕ್ಷೇತ್ರಕ್ಕೆ ಕರೆತಂದು ಗೆಲ್ಲಿಸಿಕೊಳ್ಳೋಣವೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಜಿಲ್ಲೆಯೊಳಗೆ ಕಾಂಗ್ರೆಸ್‌ಗಿಂತಲೂ ಜೆಡಿಎಸ್ ಮತಗಳ ಪ್ರಮಾಣ ಹೆಚ್ಚಿದೆ. ನಾವು ಕ್ಷೇತ್ರವನ್ನು ಬಿಟ್ಟುಕೊಡಬಾರದು. ಕ್ಷೇತ್ರವನ್ನು ನಮ್ಮಲ್ಲೇ ಉಳಿಸಿಕೊಳ್ಳಬೇಕು. ಬಿಜೆಪಿಯವರ ರಾಜಕೀಯ ಪಟ್ಟಿಗೆ ಮಣಿಯಬಾರದು. ಪಕ್ಷವನ್ನು ಸಮರ್ಥವಾಗಿ ಕಟ್ಟಿ ಬೆಳೆಸುವುದಕ್ಕೆ ಪೂರಕವಾದ ಅವಕಾಶಗಳಿವೆ. ಕ್ಷೇತ್ರವನ್ನು ಬಿಟ್ಟುಕೊಡದಿದ್ದರೆ ಮೈತ್ರಿಯನ್ನು ಮುಂದುವರೆಸದಿರುವುದೇ ಸೂಕ್ತ ಎಂಬ ಮಾತುಗಳು ಕೇಳಿಬರುತ್ತಿವೆ. ಜೆಡಿಎಸ್‌ನದೂ ನಮ್ಮಷ್ಟೇ ಪ್ರಾಬಲ್ಯ: ಮತ್ತೊಂದೆಡೆ ಬಿಜೆಪಿಯವರೂ ಅಷ್ಟೇ ನೇರವಾದ ಮಾತುಗಳನ್ನಾಡುತ್ತಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳನ್ನು ಜೆಡಿಎಸ್ ಕಳೆದುಕೊಂಡಿದೆ. ಪ್ರಸ್ತುತ ಬಿಜೆಪಿ-ಜೆಡಿಎಸ್ ಸರಿಸಮನಾದ ಪ್ರಾಬಲ್ಯವನ್ನು ಹೊಂದಿದೆ. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಶೇಕಡಾವಾರು ಮತದಾನದ ಪ್ರಮಾಣ ಹೆಚ್ಚಿದೆ. ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತಿದ್ದ ಬಿಜೆಪಿ ಕಾಂಗ್ರೆಸ್- ಜೆಡಿಎಸ್‌ಗೆ ಸಮರ್ಥ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬಲಿಷ್ಠವಾಗಿದೆ. ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆ ಕಾಣುವ ದೃಷ್ಟಿಯಿಂದ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ನಮಗೂ ಏಕಾಂಗಿಯಾಗಿ ಹೋರಾಟ ನಡೆಸುವ ಶಕ್ತಿ ಇದೆ. ನಮ್ಮ ಪಕ್ಷಕ್ಕೂ ಜಿಲ್ಲೆಯೊಳಗೆ ಮತದಾರರಿದ್ದಾರೆ. ಮೈತ್ರಿಯನ್ನು ಅವರೇ ಬಯಸಿಕೊಂಡು ನಮ್ಮ ಬಳಿ ಬಂದಿರುವುದರಿಂದ ನಾವೇಕೆ ಕ್ಷೇತ್ರವನ್ನು ಬಿಟ್ಟುಕೊಡಬೇಕು. ಅವರೇ ಬಿಟ್ಟುಕೊಡಲಿ. ಚುನಾವಣೆಯಲ್ಲಿ ನಮ್ಮ ಶಕ್ತಿ-ಸಾಮರ್ಥ್ಯಗಳನ್ನು ತೋರಿಸೋಣ. ಪ್ರತಿ ಕ್ಷೇತ್ರದಲ್ಲೂ ನಮ್ಮ ನಾಯಕತ್ವ ಪ್ರಬಲವಾಗಿರುವುದರಿಂದ ನಾವು ಕ್ಷೇತ್ರ ವಿಚಾರದಲ್ಲಿ ಜೆಡಿಎಸ್‌ಗೆ ಮಣಿಯುವುದು ಬೇಡ ಎಂದು ಬಿಜೆಪಿ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ. ಹೀಗೆ ಮೈತ್ರಿ ವಿಚಾರದಲ್ಲಿ ವಿಭಿನ್ನ ರೀತಿಯ ಅಭಿಪ್ರಾಯಗಳು ಜೆಡಿಎಸ್ ಹಾಗೂ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದ್ದು, ಮೈತ್ರಿ ಲಾಭ ಯಾರಿಗೆ ಆಗಲಿದೆ, ಯಾರು ಕ್ಷೇತ್ರ ಬಿಟ್ಟುಕೊಡುವರು, ಇದರ ಪರಿಣಾಮಗಳು ಹೇಗಿರಲಿದೆ ಎನ್ನುವುದನ್ನು ಕಾದುನೋಡಬೇಕಿದೆ. ಬಾಕ್ಸ್.... ಸುಮಲತಾ ನಿಲುವಿನ ಬಗ್ಗೆ ಬಿಜೆಪಿಯೊಳಗೆ ಬೇಸರ ಬಿಜೆಪಿಯೊಳಗೂ ಗೆಲ್ಲುವ ಅಭ್ಯರ್ಥಿಗಳು ಸದ್ಯದ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಸಂಸದೆ ಸುಮಲತಾ ಬಿಜೆಪಿಯನ್ನು ಬೆಂಬಲಿಸಿದ್ದಾರಾದರೂ ಪಕ್ಷವನ್ನು ಸೇರುವ ಬಗ್ಗೆ ಹಾಗೂ ಸ್ಪರ್ಧೆ ವಿಚಾರವಾಗಿ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ನನ್ನ ಸ್ಪರ್ಧೆ ಸಸ್ಪೆನ್ಸ್ ಎಂದು ಹೇಳುವುದರೊಂದಿಗೆ ತಮ್ಮ ರಾಜಕೀಯ ನಡೆಯ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಮತ್ತೊಂದು ಕಡೆ ಸುಮಲತಾ ಕಾಂಗ್ರೆಸ್ಸಿಗರ ವಿಚಾರದಲ್ಲಿ ಬಹಳ ಮೃದುಧೋರಣೆ ಅನುಸರಿಸುತ್ತಿದ್ದಾರೆ. ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿಲ್ಲ. ಕಾವೇರಿ ವಿಚಾರದಲ್ಲೂ ಕಾಂಗ್ರೆಸ್ ವಿರುದ್ಧ ಹರಿಹಾಯಲಿಲ್ಲ. ಮಧ್ಯಪ್ರವೇಶಕ್ಕೆ ಮೋದಿ ಅವರಿಗೆ ಪತ್ರ ಬರೆದಿದ್ದು ಪಕ್ಷದವರಲ್ಲಿ ಇರಿಸು-ಮುರಿಸು ಉಂಟು ಮಾಡಿತು. ಸುಮಲತಾ ಅವರ ಈ ರಾಜಕೀಯ ನಡೆ ಬಿಜೆಪಿಯವರಿಗೆ ಇಷ್ಟವಾಗುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಸುಮಲತಾ ಗೆಲುವಿಗೆ ಸಹಕರಿಸಿದರೂ ಸ್ಥಳೀಯ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು, ಹಲವು ಚುನಾವಣೆಗಳಲ್ಲಿ ಸಹಕಕರಿಸಲಿಲ್ಲವೆಂಬ ಅಸಮಾಧಾನ ಕಾರ್ಯಕರ್ತರಲ್ಲಿ ಈಗಲೂ ಇದೆ. ೨೦೨೩ರ ಲೋಕಸಭಾ ಚುನಾವಣೆಯಲ್ಲೂ ಕೆಲವೆಡೆ ಬಿಜೆಪಿ ಮತಗಳು ಕಾಂಗ್ರೆಸ್ ಕಡೆಗೆ ಹರಿದುಹೋಗುವುದಕ್ಕೆ ಸುಮಲತಾ ನೆರವಾದರು ಎಂಬ ಆರೋಪವೂ ಬಿಜೆಪಿ ಪಕ್ಷದವರಿಂದಲೇ ಕೇಳಿ ಬಂದಿತು. ಹಾಗಾಗಿ ಸುಮಲತಾ ಮೈತ್ರಿ ಅಭ್ಯರ್ಥಿಯಾಗುವುದು ಕಮಲ ಪಾಳಯದ ಹಲವರಿಗೆ ಇಷ್ಟವಾಗದ ವಿಚಾರವಾಗಿದೆ. ಟಿಕೆಟ್ ಕೊಡುವುದಾದರೆ ಸ್ಥಳೀಯವಾಗಿ ಬೇರೊಬ್ಬರಿಗೆ ನೀಡಬೇಕೆಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕೋಟ್.... ಮೈತ್ರಿ ವರಿಷ್ಠರ ನಿರ್ಧಾರ. ಅದಕ್ಕೆ ಎಲ್ಲರೂ ತಲೆಬಾಗಲೇಬೇಕು. ಮೈತ್ರಿಯಾದರೂ ಮಂಡ್ಯ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವ ಮಾತೇ ಉದ್ಭವಿಸುವುದಿಲ್ಲ. ಕಾಂಗ್ರೆಸ್‌ಗಿಂತಲೂ ಜೆಡಿಎಸ್ ಮತಗಳ ಪ್ರಮಾಣ ಹೆಚ್ಚಿದೆ. ಅಭ್ಯರ್ಥಿಗಳಿಗೆ ಕೊರತೆಯೂ ಇಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ ವರಿಷ್ಠರು ಕ್ಷೇತ್ರ ಹಂಚಿಕೆ ಸಮಯದಲ್ಲಿ ಮಾತನಾಡಲಿದ್ದಾರೆ. ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಸಿಗಲಿದೆ ಎಂಬ ಅಚಲ ವಿಶ್ವಾಸವಿದೆ. - ಡಿ.ರಮೇಶ್, ಜಿಲ್ಲಾಧ್ಯಕ್ಷರು, ಜೆಡಿಎಸ್ ಕೋಟ್.... ಮೈತ್ರಿ ವಿಚಾರವಾಗಿ ಪಕ್ಷದೊಳಗೆ ಯಾವುದೇ ಅಪಸ್ವರವಿಲ್ಲ. ಮೈತ್ರಿ ವಿಚಾರ ರಾಷ್ಟ್ರಮಟ್ಟದ ನಾಯಕರ ಹಂತದಲ್ಲಿ ಚರ್ಚೆಯಾಗಿದೆ. ಅದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಸೀಟು ಹಂಚಿಕೆ, ಅಭ್ಯರ್ಥಿ ಆಯ್ಕೆ ವಿಚಾರ ಇನ್ನೂ ಪ್ರಸ್ತಾಪವಾಗಿಲ್ಲ. ಮಂಡ್ಯ ಕ್ಷೇತ್ರವನ್ನು ನಮ್ಮಲ್ಲೇ ಉಳಿಸಿಕೊಳ್ಳಬೇಕೆಂಬ ಆಶಯ ನಮ್ಮದಾಗಿದೆ. ಉಳಿದಂತೆ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಅವರು ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. - ಸಿ.ಪಿ.ಉಮೇಶ್, ಜಿಲ್ಲಾಧ್ಯಕ್ಷರು, ಬಿಜೆಪಿ