ಬಿಜೆಪಿ-ಜೆಡಿಎಸ್‌ ಮೈತ್ರಿ ಮೊದಲ ರಾಜ್ಯಮಟ್ಟ ಸಭೆ ಇಂದು

| Published : Mar 29 2024, 02:02 AM IST / Updated: Mar 29 2024, 07:56 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ನಡುವೆ ಸಮನ್ವಯ ಸಾಧಿಸುವ ಉದ್ದೇಶದೊಂದಿಗೆ ಶುಕ್ರವಾರ ಉಭಯ ಪಕ್ಷಗಳ ಪ್ರಮುಖ ನಾಯಕರ ಸಭೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ನಡುವೆ ಸಮನ್ವಯ ಸಾಧಿಸುವ ಉದ್ದೇಶದೊಂದಿಗೆ ಶುಕ್ರವಾರ ಉಭಯ ಪಕ್ಷಗಳ ಪ್ರಮುಖ ನಾಯಕರ ಸಭೆ ನಡೆಯಲಿದೆ.

ಬೆಳಗ್ಗೆ 11 ಗಂಟೆಗೆ ಖಾಸಗಿ ಹೊಟೇಲ್‌ನಲ್ಲಿ ಸಭೆ ನಿಗದಿ ಮಾಡಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್‌ ಅಗರ್‌ವಾಲ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿದಂತೆ ಉಭಯ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. 

ಸಭೆಯಲ್ಲಿ ಕಾಂಗ್ರೆಸ್‌ನ ಕಾರ್ಯತಂತ್ರಕ್ಕೆ ಪ್ರತಿಯಾಗಿ ಮೈತ್ರಿ ಪಕ್ಷವು ರಣತಂತ್ರ ರೂಪಿಸುವ ಕುರಿತು ಚರ್ಚೆಗಳು ನಡೆಯಲಿವೆ.

ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಜಂಟಿ ಕೋರ್‌ ಕಮಿಟಿ ಸಭೆಗಳನ್ನು ನಡೆಸಲಾಗುತ್ತಿದೆ. ಆದರೆ ರಾಜ್ಯ ಮಟ್ಟದ ಜಂಟಿ ಕೋರ್‌ ಕಮಿಟಿ ಸಭೆಯು ಇದೇ ಮೊದಲ ಬಾರಿಗೆ ನಡೆಸಲಾಗುತ್ತಿದೆ. 

ಸಭೆಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರನ್ನು ಹೇಗೆ ಜೋಡಿಸಬೇಕು? ಸ್ಥಳೀಯ ನಾಯಕರ ವಿರೋಧ ಶಮನ ಮಾಡುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. 

ಅಲ್ಲದೇ, ಕೆಲವು ಕ್ಷೇತ್ರಗಳಲ್ಲಿ ಪ್ರಮುಖ ಮುಖಂಡರು ಮೈತ್ರಿ ಪ್ರಚಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಹಕಾರ ನೀಡುವ ಸಲಹೆ-ಸೂಚನೆ ನೀಡುವ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ.

ಹಾಸನ ಕ್ಷೇತ್ರದಲ್ಲಿ ಬಿಜೆಪಿಯ ಕೆಲವರು ಜೆಡಿಎಸ್‌ಗೆ ವಿರೋಧ ಮಾಡುತ್ತಿದ್ದು, ಇದನ್ನು ಶಮನ ಮಾಡಲು ಕಾರ್ಯತಂತ್ರ ರೂಪಿಸಲಾಗುತ್ತದೆ. ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ವಿರುದ್ಧ ರಣತಂತ್ರ ಹೆಣೆಯವ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. 

ಮಂಡ್ಯ ಕ್ಷೇತ್ರದಲ್ಲಿ ಹಾಲಿ ಸಂಸದೆ ಸುಮಲತಾ ಅವರಿಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್‌ ತಪ್ಪಿದೆ. ಇದರಿಂದ ಸುಮಲತಾ ಅವರು ಮುನಿಸಿಕೊಂಡಿದ್ದು, ಅವರ ಮನವೊಲಿಕೆ ಮಾಡುವ ಬಗ್ಗೆ ಉಭಯ ಪಕ್ಷಗಳ ಮುಖಂಡರು ಚರ್ಚೆ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ರಾಜ್ಯದ ಹಲವೆಡೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್‌ ಕಾರ್ಯಕರ್ತರು, ನಾಯಕರು ಭಾಗವಹಿಸುವ ಕುರಿತು ಮಾತುಕತೆ ನಡೆಯಲಿದೆ. 

ನರೇಂದ್ರ ಮೋದಿಯವರ ಸಮಾವೇಶದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಭಾಗಿಯಾಗುವ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಅಲ್ಲದೇ, ಮಂಡ್ಯದಲ್ಲಿ ಮೋದಿ ಸಮಾವೇಶವನ್ನು ಜಂಟಿಯಾಗಿ ಯಶಸ್ವಿ ಮಾಡುವ ಕುರಿತು ಸಹ ಸಮಾಲೋಚನೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

ರಾಜ್ಯದ ಹಲವು ಕ್ಷೇತ್ರದಲ್ಲಿ ಜೆಡಿಎಸ್‌ ಮತಗಳು ಬಿಜೆಪಿಗಿಂತಲೂ ಹೆಚ್ಚಿವೆ. ಅಂತಹ ಕ್ಷೇತ್ರದಲ್ಲಿ ಸ್ಥಳೀಯ ನಾಯಕರು ಸಮಾವೇಶದಲ್ಲಿ ಭಾಗಿಯಾಗಲು ಅನುವು ಮಾಡಿಕೊಡುವ ಕುರಿತು ಚರ್ಚೆ ನಡೆಯಲಿದೆ. 

ಇದರಿಂದ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದಂತಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಮಣಿಸಲು ಯಾವೆಲ್ಲಾ ಕಾರ್ಯತಂತ್ರಗಳನ್ನು ರೂಪಿಸಬೇಕೋ ಆ ಅಂಶಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.