ಸಾರಾಂಶ
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾಗಿರುವ ಹಗರಣ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಕುಟುಂಬಕ್ಕೆ ಜಮೀನು ಮಾರಾಟ ಮಾಡಿದ್ದ ಜಮೀನಿನ ಮೂಲ ಮಾಲೀಕರ ಕುಟುಂಬಸ್ಥರನ್ನು ಬಿಜೆಪಿ ನಿಯೋಗವು ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದೆ.
ಮಾಜಿ ಸಚಿವ ಎನ್.ಮಹೇಶ್ ನೇತೃತ್ವದಲ್ಲಿ ಮೈಸೂರಿನ ಗಾಂಧಿನಗರದಲ್ಲಿರುವ ಮಲ್ಲಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡರು, ಜಮೀನು ಮಾರಾಟ ವಿಚಾರದ ಕುರಿತಂತೆ ಜಮೀನಿನ ಮೂಲ ಮಾಲೀಕ ದಿ. ಜವರ ಅವರ ಮೊಮ್ಮಗ ಜವರಯ್ಯ, ಅವರ ಪತ್ನಿ ಪುಷ್ಪಾ ಹಾಗೂ ಮಗ ದರ್ಶನ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಈ ವೇಳೆ ಬಿಜೆಪಿ ನಿಯೋಗದ ಸದಸ್ಯರ ಎದುರು ತಮ್ಮ ಅಳಲು ತೋಡಿಕೊಂಡ ಕುಟುಂಬಸ್ಥರು, ತಮ್ಮ ಕುಟುಂಬಕ್ಕೆ ದೇವರಾಜು ಮೋಸ ಮಾಡಿ ಆಸ್ತಿ ಮಾರಾಟ ಮಾಡಿದ್ದು, ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಇದರಿಂದಾಗಿ ನಮಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸಿಕೊಡುವಂತೆ ಮನವಿ ಮಾಡಿದರು. ಕುಟುಂಬಸ್ಥರ ಸಮಸ್ಯೆ ಆಲಿಸಿದ ಬಿಜೆಪಿ ನಾಯಕರು, ಮನವಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ನ್ಯಾಯ ಕೊಡಿಸುವ ಭರವಸೆ ನೀಡಿದರು.