ಗೋಬ್ಯಾಕ್‌ ಚಳವಳಿ: ಶೋಭಾ, ಸಿ.ಟಿ.ರವಿ ಪರೋಕ್ಷ ಜಟಾಪಟಿ

| Published : Feb 25 2024, 01:46 AM IST / Updated: Feb 25 2024, 02:27 PM IST

Shobha CT Ravi

ಸಾರಾಂಶ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ‘ಗೋ ಬ್ಯಾಕ್‌ ಶೋಭಾ’ ಪ್ರತಿಭಟನೆ ವಿಷಯದಲ್ಲಿ ಬಿಜೆಪಿಯ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಟಿಕೆಟ್‌ ಆಕಾಂಕ್ಷಿ ಎನ್ನಲಾದ ಹಿರಿಯ ನಾಯಕ ಸಿ.ಟಿ.ರವಿ ನಡುವೆ ಪರೋಕ್ಷ ಜಟಾಪಟಿ ನಡೆದಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ‘ಗೋ ಬ್ಯಾಕ್‌ ಶೋಭಾ’ ಪ್ರತಿಭಟನೆ ವಿಷಯದಲ್ಲಿ ಬಿಜೆಪಿಯ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಟಿಕೆಟ್‌ ಆಕಾಂಕ್ಷಿ ಎನ್ನಲಾದ ಹಿರಿಯ ನಾಯಕ ಸಿ.ಟಿ.ರವಿ ನಡುವೆ ಪರೋಕ್ಷ ಜಟಾಪಟಿ ನಡೆದಿದೆ.

ಶನಿವಾರ ಈ ಕುರಿತು ಚಿಕ್ಕಮಗಳೂರಿನಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರ ಜೊತೆ ಮಾತನಾಡಿದ ಶೋಭಾ ಹಾಗೂ ಸಿ.ಟಿ.ರವಿ ಪರಸ್ಪರರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

‘ಗೋ ಬ್ಯಾಕ್ ಶೋಭಾ’ ಒಂದು ಸ್ಪಾನ್ಸರ್ಡ್‌ (ಪ್ರಾಯೋಜಿತ) ಕಾರ್ಯಕ್ರಮ. ಒಬ್ಬರ ತೇಜೋವಧೆ, ಅವಮಾನ ಮಾಡಿ ಆಕಾಂಕ್ಷಿಗಳು ಟಿಕೆಟ್ ಕೇಳಬಾರದು. ನಿಜವಾದ, ನಿಷ್ಠಾವಂತ ಕಾರ್ಯಕರ್ತರು ಗೋ ಬ್ಯಾಕ್‌ ಶೋಭಾ ಎಂದು ಹೇಳುವುದಿಲ್ಲ’ ಎಂದು ಹೇಳಿದರು.

ಇದಕ್ಕೆ ತೀಕ್ಷ್ಣ ತಿರುಗೇಟು ನೀಡಿದ ಸಿ.ಟಿ.ರವಿ, ‘ಇಲ್ಲಿ ಯಾವುದೂ ಬಣ ಇಲ್ಲ, ಬಿಜೆಪಿ ಮಾತ್ರ ಇರೋದು. ಹಿಂದೆಯೂ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ. ನಮ್ಮ ನಿಷ್ಠೆಯನ್ನು ಎದೆ ಬಗೆದು ತೋರಿಸಲು ಆಗುವುದಿಲ್ಲ’ ಎಂದು ಹೇಳಿದರು.

ಅಭಿವೃದ್ಧಿ ಬಗ್ಗೆ ಚರ್ಚಿಸಿ: ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆಯಾಗಲಿ. ಅದನ್ನು ಬಿಟ್ಟು ನಿಷ್ಠಾವಂತ ಕಾರ್ಯಕರ್ತರು ಗೋ ಬ್ಯಾಕ್‌ ಶೋಭಾ ಎನ್ನುವುದಿಲ್ಲ. 

ಅಧಿಕಾರಕ್ಕಾಗಿ ಬರುವವರು, ಹೋಗುವವರು ಈ ರೀತಿಯಲ್ಲಿ ಮಾಡುತ್ತಾರೆ. ಬೇರೆ ಪಾರ್ಟಿಯಲ್ಲಿ ಹಾಗೆ ಮಾಡಿರೋ ರೂಢಿ ಇರುತ್ತದೆ. ಒಬ್ಬ ವ್ಯಕ್ತಿ 10-20 ಕಾರ್ಡ್‌ಗಳನ್ನು ಕೈಯಲ್ಲಿ ಹಿಡಿದುಕೊಂಡಿರುವುದನ್ನು ನೋಡಿದ್ದೇವೆ. ಆತನನ್ನು ನೋಡಿದರೆ ಯಾರೋ ಈ ಅಭಿಯಾನವನ್ನು ಸ್ಪಾನ್ಸರ್‌ ಮಾಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಟಿಕೆಟ್ ಕೇಳಲು ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಇದೆ. ಟಿಕೆಟ್ ಕೇಳುವಾಗ ಇನ್ನೊಬ್ಬರ ತೇಜೋವಧೆ ಮಾಡಿ ಅಪಮಾನಿಸಿ ಅನವಶ್ಯಕ ಅಪಪ್ರಚಾರ ಮಾಡಿ ಟಿಕೆಟ್ ಕೇಳಬಾರದು ಎಂದು ಹೇಳಿದರು.

ನನ್ನ ವಿರುದ್ಧ ಏನೇ ಅಪಪ್ರಚಾರ ಮಾಡಿದರೂ, ಅಭಿಯಾನ ಮಾಡಿದರೂ ಯಾವುದೇ ಎಫೆಕ್ಟ್‌ ಆಗೋದಿಲ್ಲ. ಕಳೆದ ಚುನಾವಣೆಯಲ್ಲೂ ಇದೇ ರೀತಿ ಅಪಪ್ರಚಾರ ಮಾಡಿದ್ದರು. ಇದೆಲ್ಲವನ್ನು ಹೈಕಮಾಂಡ್ ಗಮನಿಸುತ್ತಿದ್ದು, ಇದಕ್ಕೆಲ್ಲ ಉತ್ತರ ಯಾರು ಕೊಡಬೇಕೋ ಅವರೇ ಕೊಡುತ್ತಾರೆ.

 ಗೋ ಬ್ಯಾಕ್ ಕಳೆದ ಬಾರಿಯೂ ನಡೆದಿತ್ತು. ರಾಜಕಾರಣದಲ್ಲಿ ಇದೆಲ್ಲಾ ಇರುವಂತಹದ್ದೇ. ರಾಜಕೀಯಕ್ಕೆ ಬಂದ ಮೇಲೆ ಎದುರಿಸಬೇಕು. ಚುನಾವಣೆಗೆ ನಿಲ್ಲಲು ಟಿಕೆಟ್‌ ಅನ್ನು ಪಕ್ಷ ನಿರ್ಧಾರ ಮಾಡುತ್ತಿದೆ. ರಸ್ತೆಯಲ್ಲಿ ನಿರ್ಧಾರ ಆಗೋದಿಲ್ಲ ಎಂದು ಆಕ್ರೋಶ ಹೊರಹಾಕಿದರು. 

ಸಿ.ಟಿ.ರವಿ ತೀಕ್ಷ್ಣ ಪ್ರತಿಕ್ರಿಯೆ: ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ನಡೆಯುತ್ತಿರುವ ಗೋ ಬ್ಯಾಕ್ ಶೋಭಾ ಅಭಿಯಾನದ ಹಿಂದೆ ತಮ್ಮ ಕೈವಾಡ ಇದೆ ಎಂಬ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಮ್ಮ ನಿಷ್ಠೆಯನ್ನು ಎದೆ ಬಗೆದು ತೋರಿಸಲು ಆಗುವುದಿಲ್ಲ. 

ನಾನು ಒಂದೊಂದು ಚುನಾವಣೆಯಲ್ಲಿ ಒಂದೊಂದು ರೀತಿ ಅಲ್ಲ. ಹುಟ್ಟಿದ್ದು ಬಿಜೆಪಿಯಲ್ಲೇ, ಸಾಯೋದು ಬಿಜೆಪಿಯಲ್ಲೇ ಎಂದು ಹೇಳಿದರು.

ನಮ್ಮ ಪಕ್ಷ ನಿಷ್ಠೆಯನ್ನು ಪ್ರಶ್ನೆ ಮಾಡುವ ಧೈರ್ಯ ಯಾರಿಗೂ ಇಲ್ಲ. ನಮ್ಮ ನಿಯತ್ತು ಏನೆಂದು ಗೊತ್ತುಪಡಿಸಲು ಯಾರೂ ಪ್ರಶ್ನೆ ಮಾಡಲು ಅವಕಾಶ ಕೊಟ್ಟಿಲ್ಲ. ನಾನು ಹಲವಾರು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. 

ಟಿಕೆಟ್ ಕೊಡುವ ಪದ್ಧತಿ ನೋಡಿದ್ದೇನೆ. ಈ ರೀತಿ ಪ್ರಕ್ರಿಯೆಯಿಂದ ಯಾರಿಗೂ ಟಿಕೆಟ್ ಸಿಗೋದಿಲ್ಲ. ನಾನಂತೂ ಕೇಳಿ ಪಡೆದುಕೊಂಡಿಲ್ಲ, ಇಂತಹದ್ದು ಕೊಡಿ ಎಂದು ಕೇಳದೆ ಪಕ್ಷದಲ್ಲಿ ಬೆಳೆದಿದ್ದೇನೆ ಎಂದು ಹೇಳಿದರು.

ಪಾರ್ಲಿಮೆಂಟರಿ ಬೋರ್ಡ್‌ ಮಿಟಿಂಗ್ ಆಗಿಲ್ಲ. ಟಿಕೆಟ್ ಫೈನಲ್ ಆಗಿರೋದು ಮೋದಿ ಒಬ್ಬರಿಗೆ ಮಾತ್ರ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಬಿಜೆಪಿ ಕೇಂದ್ರದಲ್ಲಿ ಗೆಲ್ಲಬೇಕು ಎಂದು ಹೇಳಿದರು.

ನಮ್ಮ ಅತಿರೇಕದ ಚಟುವಟಿಕೆ ಇನ್ನೊಬ್ಬರಿಗೆ ಆಹಾರವಾಗಬಾರದು. ಹಾಗಾಗಿ ಈ ರೀತಿ ಚಟುವಟಿಕೆ ಮಾಡಬಾರದು. ಪಕ್ಷದಲ್ಲಿ ಟಿಕೆಟ್ ಕೊಡುವ ಮಾನದಂಡ ಬೇರೆಯೇ ಇದೆ. ಅದರ ಅಧಾರದಲ್ಲಿ ಟಿಕೆಟ್ ನೀಡುತ್ತಾರೆ ಎಂದರು.