50 ಶಾಸಕರಿಗೆ ಬಿಜೆಪಿ ತಲಾ 50 ಕೋಟಿ ರು. ಆಫರ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ!

| Published : Nov 14 2024, 12:54 AM IST / Updated: Nov 14 2024, 04:15 AM IST

50 ಶಾಸಕರಿಗೆ ಬಿಜೆಪಿ ತಲಾ 50 ಕೋಟಿ ರು. ಆಫರ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ!
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನ 50 ಶಾಸಕರಿಗೆ ತಲಾ 50 ಕೋಟಿ ರು. ಆಮಿಷವೊಡ್ಡುವ ಮೂಲಕ ಪ್ರತಿಪಕ್ಷ ಬಿಜೆಪಿಯು ರಾಜ್ಯ ಸರ್ಕಾರವನ್ನು ಕೆಡವಲು ಯತ್ನಿಸಿತ್ತು. ಆದರೆ ಇವರ ಆಮಿಷಕ್ಕೆ ಯಾವುದೇ ಶಾಸಕರು ಬಲಿಯಾಗದಿದ್ದಾಗ ಇದೀಗ ನನ್ನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಮೈಸೂರು : ಕಾಂಗ್ರೆಸ್‌ನ 50 ಶಾಸಕರಿಗೆ ತಲಾ 50 ಕೋಟಿ ರು. ಆಮಿಷವೊಡ್ಡುವ ಮೂಲಕ ಪ್ರತಿಪಕ್ಷ ಬಿಜೆಪಿಯು ರಾಜ್ಯ ಸರ್ಕಾರವನ್ನು ಕೆಡವಲು ಯತ್ನಿಸಿತ್ತು. ಆದರೆ ಇವರ ಆಮಿಷಕ್ಕೆ ಯಾವುದೇ ಶಾಸಕರು ಬಲಿಯಾಗದಿದ್ದಾಗ ಇದೀಗ ನನ್ನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಜಿಲ್ಲಾಡಳಿತ ಮತ್ತು ಜಿ.ಪಂ. ವತಿಯಿಂದ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ 470 ಕೋಟಿ ರು. ಮೌಲ್ಯದ ಕಾಮಗಾರಿಗಳ ಉದ್ಘಾಟನೆ ಮತ್ತು ಕಟ್ಟಡಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ಫಲಾನುಭವಿಗಳಿಗೆ ನೇರವಾಗಿ ಸವಲತ್ತು ವಿತರಿಸಿ ಬುಧವಾರ ಮಾತನಾಡಿದರು.

ನಮ್ಮ ಶಾಸಕರಿಗೆ ತಲಾ 50 ಕೋಟಿ ರು. ಆಫರ್ ನೀಡುವ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತೆ? ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇನಾದರೂ ಅಷ್ಟು ಹಣವನ್ನು ಪ್ರಿಂಟ್ ಹಾಕಿದ್ರಾ? ಅದೆಲ್ಲ ರಾಜ್ಯವನ್ನು ಲೂಟಿ ಹೊಡೆದ ಹಣ ತಾನೇ? ಆದರೆ ಈ ಬಾರಿ ನಮ್ಮ ಶಾಸಕರು ಅವರ ಆಮಿಷಕ್ಕೆ ಬಲಿಯಾಗಲಿಲ್ಲ. ಇದೇ ಕಾರಣಕ್ಕೆ ಅವರು ಇದೀಗ ನಮ್ಮ ಸರ್ಕಾರ ಕೆಡಹುವ ಆಂದೋಲನ ಶುರು ಮಾಡಿದ್ದಾರೆ. ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಆಟ ಆಡ್ತೀರಾ?:

ಜಾರಿ ನಿರ್ದೇಶನಾಲಯ(ಇ.ಡಿ), ಸಿಬಿಐ, ಐಟಿ ಹಾಗೂ ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡು ಆಟ ಆಡ್ತೀರಾ? ಎಂದು ಇದೇ ವೇಳೆ ಕಿಡಿಕಾರಿದ ಅವರು, ಅರವಿಂದ್ ಕೇಜ್ರಿವಾಲ್ ಆಯ್ತು, ಈಗ ನನ್ನ ಮತ್ತು ನನ್ನ ಪತ್ನಿಯನ್ನೂ ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿದರು.

ನಾನು ನಿನ್ನೆ, ಮೊನ್ನೆ ಮಂತ್ರಿಯಾದವನಲ್ಲ. 40 ವರ್ಷದಿಂದ ಮಂತ್ರಿಯಾಗಿದ್ದೀನಿ. ಸುಳ್ಳು ಕೇಸಲ್ಲಿ ನನ್ನನ್ನು, ನನ್ನ ಧರ್ಮಪತ್ನಿಯನ್ನು ಎಳೀತೀರಾ? ರಾಜ್ಯದ ಜನರೇನು ಮೂರ್ಖರಾ? ರಾಜ್ಯದ ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನಾನು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಷಡ್ಯಂತ್ರಗಳಿಗೆ ಜಗ್ಗಲ್ಲ, ಬಗ್ಗಲ್ಲ. ನೀವೂ ಕೂಡ ಸುಖಾಸುಮ್ಮನೆ ತಂಟೆಗೆ ಬಂದರೆ ಸುಮ್ಮನಿರಲ್ಲ ಎನ್ನುವ ಎಚ್ಚರಿಕೆ ಕೊಡಬೇಕಿದೆ ಎಂದು ಜನರಿಗೆ ಕರೆ ನೀಡಿದರು.

ರಾಜ್ಯದಲ್ಲಿ ನಮ್ಮ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿ ಆದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಭಯಾನಕ ಸುಳ್ಳುಗಳನ್ನು ಸೃಷ್ಟಿಸುತ್ತಿದೆ. ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಹಸಿ ಹಸಿ ಸುಳ್ಳಿನ ಅಪಪ್ರಚಾರ ಮಾಡುತ್ತಿದೆ. ರಾಜ್ಯ ಸರ್ಕಾರ ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರು. ಕೊಟ್ಟರೆ, ಅಭಿವೃದ್ಧಿ ಕಾರ್ಯಗಳಿಗೆ 1.20 ಲಕ್ಷ ಕೋಟಿ ರು. ನೀಡಿದೆ.ಇಂದು ನರಸೀಪುರದಲ್ಲಿ 470 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ದೊರೆತಿದೆ. ಬಿಜೆಪಿಯ ಸುಳ್ಳುಗಳಿಗೆ ಇವತ್ತಿನ ಅಭಿವೃದ್ಧಿ ಕಾರ್ಯಕ್ರಮ ಕನ್ನಡಿ ಹಿಡಿದಿದೆ ಎಂದರು.

ಗ್ಯಾರಂಟಿ ಫಲಾನುಭವಿಗಳಲ್ವಾ?:

ಬಿಜೆಪಿಯವರಿಗೆ ನಾನು ನೇರವಾಗಿ ಒಂದು ಪ್ರಶ್ನೆ ಕೇಳ್ತೇನೆ. ರಾಜ್ಯದಲ್ಲಿ ಬಿಜೆಪಿಯವರು ನಮ್ಮ ಗ್ಯಾರಂಟಿಗಳ ಫಲಾನುಭವಿಗಳಲ್ವಾ? ಬಿಜೆಪಿಯವರು ಉಚಿತವಾಗಿ ಬಸ್ಸಲ್ಲಿ ಓಡಾಡುತ್ತಿಲ್ವಾ? ಉಚಿತ ವಿದ್ಯುತ್ ಪಡೆಯುತ್ತಿಲ್ವಾ? ಗೃಹಲಕ್ಷ್ಮಿ ಹಣ ಪಡೆಯುತ್ತಿಲ್ವಾ? ತಾವು ಗ್ಯಾರಂಟಿ ಫಲಾನುಭವಿಗಳಲ್ಲ ಎಂದು ಬಿಜೆಪಿಯವರು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ ಎಂದು ಸವಾಲೆಸೆದರು.

- ಯಾವ ಕಾಂಗ್ರೆಸ್‌ ಶಾಸಕರೂ ಆಮಿಷಕ್ಕೆ ಮರುಳಾಗಿಲ್ಲ- ಈ ಕಾರಣಕ್ಕೇ ನನ್ಮೇಲೆ ಸುಳ್ಳು ಕೇಸ್‌ ಹಾಕಿದ್ದಾರೆ: ಸಿದ್ದು 

ಬಿಜೆಪಿಗೆ ಸಿದ್ದು ವಾಗ್ಬಾಣ

- ಕಾಂಗ್ರೆಸ್‌ ಶಾಸಕರನ್ನು ಸೆಳೆದು ಸರ್ಕಾರ ಕೆಡವಲು ಬಿಜೆಪಿಯಿಂದ ಪ್ರಯತ್ನ

- ಅದು ಸಾಧ್ಯವಾಗದೇ ಇದ್ದಾಗ ನನ್ನ ಮೇಲೆ ಸುಳ್ಳು ಕೇಸ್‌ ಹಾಕಿ ತೀವ್ರ ಕಿರುಕುಳ

- ಒಬ್ಬೊಬ್ಬ ಶಾಸಕರಿಗೆ 50 ಕೋಟಿ ರು. ಆಫರ್‌ ಮಾಡಲು ಹಣ ಎಲ್ಲಿಂದ ಬರುತ್ತೆ?

- ಯಡಿಯೂರಪ್ಪ, ಬೊಮ್ಮಾಯಿ, ವಿಜಯೇಂದ್ರ, ಅಶೋಕ್‌ ಹಣ ಪ್ರಿಂಟ್‌ ಮಾಡ್ತಾರಾ?

- ಇ.ಡಿ, ಸಿಬಿಐ, ಐಟಿ, ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಂಡು ಆಟ ಆಡ್ತೀರಾ?

- ದಿಲ್ಲಿಯಲ್ಲಿ ಕೇಜ್ರಿವಾಲ್‌ ಬಳಿಕ ಇಲ್ಲಿ ನನ್ನನ್ನೂ, ನನ್ನ ಪತ್ನಿಯನ್ನೂ ಟಾರ್ಗೆಟ್‌ ಮಾಡಿದ್ದಾರೆ

- ರಾಜ್ಯದ ಜನರೇನು ಮೂರ್ಖರಾ? ಬಿಜೆಪಿಯ ಇಂತಹ ಷಡ್ಯಂತ್ರಕ್ಕೆ ಯಾರೂ ಮರುಳಾಗಲ್ಲ

- ಸುಖಾಸುಮ್ಮನೆ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಜನರೂ ಬಿಜೆಪಿಗೆ ಎಚ್ಚರಿಕೆ ನೀಡಿ