ಬರ ಹಣ ಕೇಳಲು ಲಕ್ಷುರಿ ಪ್ಲೇನ್‌ನಲ್ಲಿ ಸಿದ್ದು: ಬಿಜೆಪಿ

| Published : Dec 23 2023, 01:47 AM IST

ಸಾರಾಂಶ

ಬರ ಪರಿಹಾರ ಕೇಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಖಾಸದಿ ಐಷಾರಾಮಿ ವಿಮಾನದಲ್ಲಿ ಪ್ರಯಾಣಿಸಿದ ಬಗ್ಗೆ ವಿರೋಧ ಪಕ್ಷ ಬಿಜೆಪಿ ಕಿಡಿಕಾರಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು/ನವದೆಹಲಿ

ಬರ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಜಮೀರ್‌ ಅಹಮದ್‌ ಹಾಗೂ ಇತರ ಸಚಿವರು ಇತ್ತೀಚೆಗೆ ಐಷಾರಾಮಿ ಖಾಸಗಿ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿರುವುದು ಇದೀಗ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ.

ರಾಜ್ಯದ ಜನ ಬರದಿಂದ ಕಂಗೆಟ್ಟಿರುವ ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಅವರು ಮಸ್ತಿಯಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯ ಸಮಾಜವಾದಿಯಲ್ಲ, ಮಜಾವಾದಿ. ಕಾಂಗ್ರೆಸ್‌ ಪಕ್ಷ ಕರ್ನಾಟಕವನ್ನು ಲೂಟಿ ಮಾಡುತ್ತಿದೆ ಎಂದು ಬಿಜೆಪಿ ನಾಯಕರಾದ ಪ್ರಹ್ಲಾದ್‌ ಜೋಶಿ, ಅಮಿತ್‌ ಮಾಳವೀಯ, ವಿಜಯೇಂದ್ರ, ಆರ್‌.ಅಶೋಕ್‌ ಸೇರಿ ಕೇಂದ್ರ ಹಾಗೂ ರಾಜ್ಯದ ಹಲವು ಮುಖಂಡರು ಕಿಡಿಕಾರಿದ್ದಾರೆ.

ಸಚಿವ ಜಮೀರ್‌ ಅಹಮದ್‌ ಅವರು ಮುಖ್ಯಮಂತ್ರಿ ಜತೆಗೆ ಖಾಸಗಿ ಜೆಟ್‌ನಲ್ಲಿ ದೆಹಲಿಗೆ ಪ್ರಯಾಣಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್‌ ಮಾಳವೀಯ, ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ನಡೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಕಾಂಗ್ರೆಸ್‌ ನಾಯಕರು ಕ್ರೌಡ್‌ ಫಂಡಿಂಗ್‌ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದರೆ, ಮತ್ತೊಂದು ಕಡೆ ಬರ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಲು ಅವರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಐಷಾರಾಮಿ ಖಾಸಗಿ ಜೆಟ್‌ನಲ್ಲಿ ದೆಹಲಿಗೆ ಪ್ರಯಾಣಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಈ ಮಧ್ಯೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕೂಡ ಮುಖ್ಯಮಂತ್ರಿ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬರಗಾಲದ ಈ ಸಮಯದಲ್ಲಿ ಐಷಾರಾಮಿ ಯಾತ್ರೆ ಸರಿಯೇ ಎಂದು ಪ್ರಶ್ನಿಸಿರುವ ಅವರು, ಕರ್ನಾಟಕದಲ್ಲಿ ಸಾರ್ವಜನಿಕರ ಹಣ ಲೂಟಿ ಮಾಡಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕದ ಬೊಕ್ಕಸ ಬರಿದಾಗಲಿದೆ. ವಿಮಾನ ಸೌಲಭ್ಯ ಇಲ್ಲವೆಂದಾದರೆ ಇಂಥ ವಿಮಾನಯಾನ ಒಪ್ಪಬಹುದು. ಆದರೆ ಬೆಂಗಳೂರಿನಿಂದ ದೆಹಲಿಗೆ ಗಂಟೆಗೊಮ್ಮೆ ವಿಮಾನ ಸೌಲಭ್ಯವಿದೆ. ಹೀಗಿದ್ದಾಗ ಐಷಾರಾಮಿ ವಿಮಾನಯಾನ ಒಪ್ಪುವಂಥದಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಜಾವಾದಿ:

ರಾಜ್ಯದಲ್ಲಿ ಭೀಕರ ಬರದಿಂದ ಏಳು ತಿಂಗಳಲ್ಲಿ 350ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಿದ್ದರೂ ಸಿದ್ದರಾಮಯ್ಯ ‍ವಿಶೇಷ ವಿಮಾನದಲ್ಲಿ ಪ್ರಯಾಣಿಸುವ ಮೂಲಕ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಮೇಲ್ಪಂಕ್ತಿ ಹಾಕಿಕೊಡಬೇಕಾದ ಮುಖ್ಯಮಂತ್ರಿಗಳು ಮಜಾ ಮಾಡುತ್ತಿದ್ದಾರೆ. ಸದಾ ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ತಾವು ಸಮಾಜವಾದಿಯೋ ಅಥವಾ ಮಜಾವಾದಿಯೋ ಎಂದು ಸ್ಪಷ್ಟಪಡಿಸುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹಿಸಿದ್ದಾರೆ.ಇದೇ ವೇಳೆ, ಸಿದ್ದರಾಮಯ್ಯ ಮತ್ತವರ ಸಚಿವ ಸಂಪುಟದ ಸಹೋದ್ಯೋಗಿಗಳ ವಿಮಾನ ಪ್ರಯಾಣವನ್ನು ‘ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ, ಜನರ ದುಡ್ಡು ಆಕಾಶದಲ್ಲಿ ಜಾತ್ರೆ’ ಎಂದು ಜರಿದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯದಲ್ಲಿ ಭೀಕರ ಬರ ಆವರಿಸಿರುವ ಈ ಹೊತ್ತಿನಲ್ಲೂ ಶ್ರೀಮಂತಿಕೆಯ ದರ್ಪ ತೋರುವ, ಮೋಜು ಮಸ್ತಿ ಸರಿಯೇ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಮತ್ತು ಅವರ ಕೆಲ ಸಚಿವ ಸಂಪುಟದ ಸಹೋದ್ಯೋಗಿಗಳು ಬರಪರಿಹಾರದ ಹಣ ಬಿಡುಗಡೆ ಮಾಡುವಂತೆ ಕೇಂದ್ರವನ್ನು ಆಗ್ರಹಿಸಲು ಇತ್ತೀಚೆಗೆ ದೆಹಲಿಗೆ ತೆರಳಿದ್ದರು. ಈ ವೇಳೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವರನ್ನು ಭೇಟಿಯಾಗಿ ಬರಪರಿಹಾರ ಶೀಘ್ರ ಬಿಡುಗಡೆಗೆ ಆಗ್ರಹಿಸಿದ್ದರು.