ಸಾರಾಂಶ
ಈ ಸಂಬಂಧ ಶಾಸಕರ ಜತೆ ಚರ್ಚಿಸುವೆ-ವಿಜಯೇಂದ್ರ
-ಶಾಸಕರು ಶಿಸ್ತು ಉಲ್ಲಂಘಿಸಿಲ್ಲ: ಅಶೋಕ್ಕನ್ನಡಪ್ರಭ ವಾರ್ತೆ, ಸುವರ್ಣಸೌಧಆಡಳಿತಾರೂಢ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬೆನ್ನಲ್ಲೇ ಆಯೋಜಿಸಲಾಗಿದ್ದ ಆ ಪಕ್ಷದ ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗಿಯಾಗಿದ್ದರ ಬಗ್ಗೆ ಬಿಜೆಪಿ ನಾಯಕರಲ್ಲೇ ಭಿನ್ನ ಅಭಿಪ್ರಾಯ ಹೊರಬಿದ್ದಿದೆ.
ಪಕ್ಷದ ಶಾಸಕರಾದ ಎಸ್.ಟಿ.ಸೋಮಶೇಖರ್ ಸೇರಿದಂತೆ ಇತರರು ಯಾವುದೇ ರೀತಿಯ ಶಿಸ್ತು ಉಲ್ಲಂಘನೆ ಮಾಡಿಲ್ಲ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದರೆ, ಇದೊಂದು ಗಂಭೀರ ವಿಷಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಶಾಸಕ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ನಾಯಕರು ಊಟಕ್ಕೆ ಕರೆದಿದ್ದರು. ಅದಕ್ಕಾಗಿ ಹೋಗಿದ್ದೆವು ಎಂದು ಹೇಳಿದ್ದಾರೆ. ಆ ದೃಷ್ಟಿಯಿಂದ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರು ಬುಧವಾರದ ಬಿಜೆಪಿಯ ಧರಣಿಯಲ್ಲೂ ಕೂಡ ಭಾಗವಹಿಸಿದ್ದರು. ನಮ್ಮ ಸಭೆಗಳಿಗೂ ಬಂದಿದ್ದರು. ಕಳೆದ ಮೂರು ತಿಂಗಳಿನಿಂದ ಇಂತಹ ಘಟನೆಗಳು ನಡೆಯುತ್ತಿವೆ. ಏನೇ ಇದ್ದರೂ ಮತ್ತೊಮ್ಮೆ ಅವರನ್ನು ಕರೆದು ಮಾತನಾಡುತ್ತೇನೆ ಎಂದರು. ಇನ್ನು ವಿಜಯೇಂದ್ರ ಮಾತನಾಡಿ, ಪಕ್ಷದ ಶಾಸಕರು ಭೋಜನ ಕೂಟಕ್ಕೆ ಹೋಗಿರುವ ಮಾಹಿತಿ ತಿಳಿಯಿತು. ಇದು ಗಂಭೀರವಾದ ವಿಷಯ. ಈ ಸಂಬಂಧ ಅವರ ಜೊತೆ ಚರ್ಚೆ ನಡೆಸುತ್ತೇನೆ ಎಂದರು.
-ಬಾಕ್ಸ್-ಸೋಮಶೇಖರ್ ಜತೆ ಅಶೋಕ್ ಮಾತುಕತೆ
ಈ ನಡುವೆ ವಿಧಾನಸಭೆಯ ಕಲಾಪದ ಹೊತ್ತಿನಲ್ಲೇ ಮೊಗಸಾಲೆಯಲ್ಲಿ ಅಶೋಕ್ ಅವರು ಶಾಸಕ ಸೋಮಶೇಖರ್ ಜತೆ ಕೆಲಕಾಲ ಮಾತುಕತೆ ನಡೆಸಿದರು. ಇದೇ ವೇಳೆ ಸೋಮಶೇಖರ್ ಅವರು ತಾವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಔತಣಕೂಟಕ್ಕೆ ಮಾತ್ರ ಹೋಗಿದ್ದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಸಮಜಾಯಿಷಿ ನೀಡಿದರು ಎನ್ನಲಾಗಿದೆ.