ಸಾರಾಂಶ
ರಾಜ್ಯದ ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿಯ ಗಲಭೆಕೋರರ ವಿರುದ್ಧದ ಕ್ರಿಮಿನಲ್ ಪ್ರಕರಣ ವಾಪಸ್ ಪಡೆದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಪ್ರಮುಖ ಪ್ರತಿಪಕ್ಷ ಬಿಜೆಪಿಯ ನಾಯಕರು ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿಯ ಗಲಭೆಕೋರರ ವಿರುದ್ಧದ ಕ್ರಿಮಿನಲ್ ಪ್ರಕರಣ ವಾಪಸ್ ಪಡೆದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಪ್ರಮುಖ ಪ್ರತಿಪಕ್ಷ ಬಿಜೆಪಿಯ ನಾಯಕರು ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಸೋಮವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರತಿಭಟನಾಕಾರರು ಗಲಭೆಕೋರರ ವಿರುದ್ಧ ಕ್ರಿಮಿನಲ್ ಪ್ರಕರಣ ಹಿಂಪಡೆಯುತ್ತಿರುವುದು ಖಂಡನೀಯ ಎಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆ ನಡೆಸಿದ ಬಳಿಕ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಿಯೋಗವು ರಾಜಭವನಕ್ಕೆ ತೆರಳಿತು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿಯಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಕ್ರಿಮಿನಲ್‌ಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುತ್ತಿರುವ ಕ್ರಮ ಸರಿಯಲ್ಲ. ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರದ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಸಲ್ಲಿಸಿತು.
ಹಿಂದೂ ವಿರೋಧಿ ಸರ್ಕಾರ- ಬಿವೈವಿ:
ಇದಕ್ಕೂ ಮುನ್ನ ಪ್ರತಿಭಟನೆಯಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದೂಗಳ ವಿರೋಧಿ ಸರ್ಕಾರವಾಗಿದ್ದು, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸವನ್ನು ಮಾಡಿದೆ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಂದು ಸಾಂಕೇತಿಕ ಪ್ರತಿಭಟನೆ ಇದಾಗಿದೆ. ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಗಲಭೆ ಸೃಷ್ಟಿಸಿದ್ದ ದೇಶದ್ರೋಹಿಗಳ ಮೇಲಿನ ಪ್ರಕರಣಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂಪಡೆದಿದೆ. ಮುಖ್ಯಮಂತ್ರಿಗಳ ಕುರ್ಚಿ ಅಲ್ಲಾಡುತ್ತಿದೆ ಎಂದು ಯಾವ ಮಟ್ಟಕ್ಕೆ ಹೋಗುವುದಕ್ಕೂ ಕಾಂಗ್ರೆಸ್ ಸರ್ಕಾರ ಹೇಸುವುದಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಶ್ಚಿತ. ಒಂದು ವೇಳೆ ಅವರು ಐದು ವರ್ಷ ಮುಖ್ಯಮಂತ್ರಿ ಎನ್ನುವುದಾದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಂದ ಹೇಳಿಸಿ ನೋಡೋಣ ಎಂದು ಸವಾಲು ಹಾಕಿದರು.
ಬಿಜೆಪಿ ಹೋರಾಟದ ಬಳಿಕ ಮುಡಾ ಹಗರಣದಲ್ಲಿ ಕದ್ದ ಮಾಲನ್ನು ವಾಪಸ್ ಕೊಡಲು ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಗಳ ಪಾಪದ ಕೊಡ ತುಂಬಿದೆ. ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಸೂರ್ಯ ಚಂದ್ರರು ಇರುವಷ್ಟೇ ಸತ್ಯ. ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಜನಾಂದೋಲನ ಮಾಡಲಾಗುವುದು ಎಂದರು.
ಸಿದ್ದು 5 ವರ್ಷ ಸಿಎಂ ಎಂದು ಖರ್ಗೆಯಿಂದ ಹೇಳಿಸಿ: ಸವಾಲು
ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಗಲಭೆ ಸೃಷ್ಟಿಸಿದ್ದ ದೇಶದ್ರೋಹಿಗಳ ಮೇಲಿನ ಪ್ರಕರಣಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂಪಡೆದಿದೆ. ಸಿಎಂ ಕುರ್ಚಿ ಅಲ್ಲಾಡುತ್ತಿದೆ ಎಂದು ಯಾವ ಮಟ್ಟಕ್ಕೆ ಹೋಗುವುದಕ್ಕೂ ಕಾಂಗ್ರೆಸ್ ಸರ್ಕಾರ ಹೇಸುವುದಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಶ್ಚಿತ. ಒಂದು ವೇಳೆ ಅವರು ಐದು ವರ್ಷ ಮುಖ್ಯಮಂತ್ರಿ ಎನ್ನುವುದಾದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಂದ ಹೇಳಿಸಿ ನೋಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದರು.
ಹಗರಣ ಮರೆಮಾಚಲು ಪ್ರಕರಣ ವಾಪಸ್ -ಅಶೋಕ್:
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಮತಬ್ಯಾಂಕ್‌ಗಾಗಿ ಮತ್ತು ಹಗರಣಗಳನ್ನು ಮರೆಮಾಚಲು ಕ್ರಿಮಿನಲ್ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯುತ್ತಿದೆ. ಕುರ್ಚಿ ಅಲುಗಾಡುತ್ತಿರುವ ವೇಳೆ ಮುಸ್ಲಿಮರು ನನ್ನ ಪರವಾಗಿದ್ದಾರೆ ಎಂಬುದಾಗಿ ತೋರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ್ರೋಹಿ ಚಟುವಟಿಕೆ, ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿಹಾಕಿದೆ. ರೈತ ಹೋರಾಟ, ಕನ್ನಡ ಹೋರಾಟಗಳಿಗೆ ಇದನ್ನು ಹೋಲಿಸಬಾರದು. ರೈತರ ವಿರುದ್ಧದ ಪ್ರಕರಣ ವಾಪಸ್ ಪಡೆಯಲು ಸಿ.ಟಿ.ರವಿ ಮನವಿ ಮಾಡಿದ್ದರೂ ಅದಕ್ಕೆ ಸರ್ಕಾರ ಸ್ಪಂದಿಸಿಲ್ಲ. ಮುಡಾ, ವಾಲ್ಮೀಕಿ ನಿಗಮದ ಹಗರಣದಿಂದ ತಪ್ಪಿಸಿಕೊಳ್ಳಲು ಈ ತಂತ್ರ ಮಾಡಿರಬಹುದು. ಇದರ ಜೊತೆಗೆ ಕೇಂದ್ರ ಸರ್ಕಾರ ಅನುದಾನ ತಾರತಮ್ಯ ಮಾಡಿದೆ ಎಂಬ ಸುಳ್ಳು ಹಬ್ಬಿಸುತ್ತಿದ್ದಾರೆ. ಮೆಟ್ರೋ, ಜಲಜೀವನ್ ಮಿಷನ್, ಉಪನಗರ ರೈಲು ಮೊದಲಾದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಅನುದಾನ ನೀಡಿದ್ದಾರೆ. ಅಷ್ಟೊಂದು ಆರೋಪ ಮಾಡುವುದಾದರೆ ಶ್ವೇತಪತ್ರ ಬಿಡುಗಡೆ ಮಾಡಿ, ಎಷ್ಟು ಅನುದಾನ ನೀಡಲಾಗಿದೆ ಎಂಬುದನ್ನು ತಿಳಿಸಬೇಕು ಎಂದು ಹೇಳಿದರು.
ಪ್ರಕರಣ ಹಿಂಪಡೆದ ಕುರಿತು ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಪತ್ರ ಸಲ್ಲಿಸಲಾಗಿದೆ. ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಬಗ್ಗೆ ಸರ್ಕಾರದ ಬಳಿ ಸ್ಪಷ್ಟನೆ ಕೇಳಲಾಗುವುದು ಎಂಬುದಾಗಿ ರಾಜ್ಯಪಾಲರು ತಿಳಿಸಿದ್ದಾರೆ. ಸರ್ಕಾರದ ಈ ಕ್ರಮದ ವಿರುದ್ಧ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ದೇಶದ್ರೋಹಿಗಳ ವಿರುದ್ಧ ಬಿಜೆಪಿ ಸರ್ಕಾರ ಪ್ರಕರಣಗಳನ್ನು ದಾಖಲಿಸಿದ್ದು, ಎನ್‌ಐಎ ತನಿಖೆ ನಡೆಯುತ್ತಿರುವ ವೇಳೆ ಪ್ರಕರಣ ರದ್ಧತಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರತಿಭಟನೆ ಹೆಚ್ಚಾದ ಬಳಿಕ ನ್ಯಾಯಾಲಯ ಒಪ್ಪಿದರೆ ಮಾತ್ರ ಪ್ರಕರಣ ಹಿಂಪಡೆಯುವುದಾಗಿ ಎಂದು ಯೂಟರ್ನ್ ಹೊಡೆಯಲಾಗಿದೆ.
- ಛಲವಾದಿ ನಾರಾಯಣಸ್ವಾಮಿ, ಪ್ರತಿಪಕ್ಷ ನಾಯಕ, ವಿಧಾನಪರಿಷತ್
ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ನ್ಯಾಯಾಲಯದಲ್ಲಿ ಮಾತ್ರವಲ್ಲದೇ, ಜನತಾ ನ್ಯಾಯಾಲಯದಲ್ಲೂ ಬಿಜೆಪಿ ಹೋರಾಟ ಮಾಡಲಿದೆ. ಹಿಜಾಬ್ ವಿರುದ್ಧ ಹೋರಾಟ ಮಾಡಿದವರ ಪ್ರಕರಣ ವಾಪಸ್ ಪಡೆದಿಲ್ಲ. ಆದರೆ, ಹಿಜಾಬ್ ಪರವಾಗಿ ಹೋರಾಟ ಮಾಡಿದವರ ಪ್ರಕರಣ ವಾಪಸ್ ಪಡೆಯಲಾಗುತ್ತಿದೆ.
-ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ
ಹುಬ್ಬಳ್ಳಿಯಲ್ಲಿ ದೇಶದ್ರೋಹಿಗಳ ಪ್ರಕರಣವನ್ನು ವಾಪಸ್ ಪಡೆಯುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಎಲ್ಲಾ ಸಹೋದ್ಯೋಗಿಗಳೂ ಭಯೋತ್ಪಾದಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಖಂಡನೀಯ.
-ಗೋವಿಂದ ಕಾರಜೋಳ, ಸಂಸದ