ತಾಲೂಕಿನ ಮೊಮ್ಮಗ ಮಲ್ಲೇಶಬಾಬುಗೆ ಆಶೀರ್ವದಿಸಿ: ಜಿ.ಕೆ.ವೆಂಕಟಶಿವಾರೆಡ್ಡಿ

| Published : Apr 13 2024, 01:06 AM IST / Updated: Apr 13 2024, 04:26 AM IST

ತಾಲೂಕಿನ ಮೊಮ್ಮಗ ಮಲ್ಲೇಶಬಾಬುಗೆ ಆಶೀರ್ವದಿಸಿ: ಜಿ.ಕೆ.ವೆಂಕಟಶಿವಾರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಎರಡು ವರ್ಷಗಳಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡಿ ತಾಲ್ಲೂಕಿನ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಮತ್ತು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಬೇಕು

 ಶ್ರೀನಿವಾಸಪುರ : ಸುಮಾರು 50 ವರ್ಷಗಳ ಇತಿಹಾಸದಲ್ಲಿ ಮೊದಲ ಭಾರಿಗೆ ಶ್ರೀನಿವಾಸಪುರ ತಾಲ್ಲೂಕಿನ ಮೊಮ್ಮಗನಿಗೆ ಸಂಸದರಾಗುವ ಅವಕಾಶ ಒದಗಿ ಬಂದಿದೆ, ಆದ್ದರಿಂದ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಶೀರ್ವಾದ ಮಾಡಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮನವಿ ಮಾಡಿದರು.ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು, ಗೌನಿಪಲ್ಲಿ, ಲಕ್ಷ್ಮೀಪುರ, ಪುಂಗನೂರು ಕ್ರಾಸ್‌ಗಳಲ್ಲಿ ಎನ್‌ಡಿಎ ಅಭ್ಯರ್ಥಿಯ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನ ಲಕ್ಷ್ಮೀಪುರ ಮತ್ತು ಯಲ್ದೂರು ಬಳಿ ಮೂರು ಸಾವಿರ ಎಕ್ಟೇರ್ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡಲು ಸರ್ಕಾರದ ಹಂತದಲ್ಲಿ ಎಲ್ಲಾ ರೀತಿಯ ಪೂರ್ವ ತಯಾರಿ ನಡೆದಿದೆ, ಮುಂದಿನ ಎರಡು ವರ್ಷಗಳಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡಿ ತಾಲ್ಲೂಕಿನ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವುದು ಮಾತ್ರವಲ್ಲದೆ ತಾಲ್ಲೂಕು ಸರ್ವಾಂಗೀಣ ಅಭಿವೃದ್ದಿ ಮಾಡಲಾಗುವುದು ಎಂದರು.ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ದೇಶವನ್ನು ನರೇಂದ್ರ ಮೋದಿಯವರು ಸಮಗ್ರವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ, ದೇಶದ ಎಲ್ಲಾ ವರ್ಗದ ಜನರಿಗೂ ಸೌಲಭ್ಯಗಳನ್ನು ಒದಗಿಸಿಕೊಂಡು ಜೊತೆಗೆ ದೇಶದ ಭದ್ರತೆಗೆ ಹೆಚ್ಚು ಒತ್ತು ನೀಡುತ್ತಾ ಬಂದಿದ್ದಾರೆ ಎಂದರು.

ಎನ್‌ಡಿಎ ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ನಾನು ಶ್ರೀನಿವಾಸಪುರ ತಾಲ್ಲೂಕಿನ ಮೊಮ್ಮಗ, ನಮ್ಮ ತಾಯಿ ಶ್ರೀನಿವಾಸಪುರ ತಾಲೂಕಿನ ಮಗಳು ನಮ್ಮ ತಾಯಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ, ತಂದೆ ಐಎಎಸ್ ಅಧಿಕಾರಿಯಾಗಿ ಜಿಲ್ಲೆಯಲ್ಲಿ ಕೆಲಸ ಮಾಡಿ ಉತ್ತಮ ಗೌರವ ಉಳಿಸಿಕೊಂಡಿದ್ದಾರೆ ನಾನೂ ಸಹ ಅವರ ಹಾದಿಯಾಗಿ ಜಿಲ್ಲೆಗೆ ಸೇವೆ ಮಾಡಬೇಕೆಂದು ಬಂದಿದ್ದೇನೆ, ನನಗೆ ಆಶೀರ್ವದಿಸಿ ಎಂದರು.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕೋಲಾರ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಹೋಗಿ ಕೋಲಾರದಲ್ಲಿ ಯಾವ ನಾಯಕರೂ ನನಗೆ ಸ್ಪಂಧಿಸುತ್ತಿಲ್ಲ, ನನ್ನನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಕಣ್ಣೀರು ಹಾಕುತ್ತಿದ್ದಾರೆ, ಕೋಲಾರ ಕಾಂಗ್ರೆಸ್ ಗುಂಪುಗಾರಿಕೆಗೆ ಬೇಸತ್ತ ಕಾಂಗ್ರೆಸ್ ಹೈಕಮಾಂಡ್ ಆಂಧ್ರ ಮೂಲದ ವ್ಯಕ್ತಿಯನ್ನು ತಂದು ಕೋಲಾರಕ್ಕೆ ಕಳುಹಿಸಿದ್ದಾರೆ, ಹೊರಗಿನ ರಾಜ್ಯದಿಂದ ಬಂದವರನ್ನು ಗೆಲ್ಲಿಸಿ ಕೊಡುವುದಕ್ಕಿಂತ ಶ್ರೀನಿವಾಸಪುರ ತಾಲ್ಲೂಕಿನ ಮೊಮ್ಮಗ ಕೋಲಾರದ ಮಗ ಮಲ್ಲೇಶ್ ಬಾಬುರಿಗೆ ಆಶೀರ್ವಾದ ಮಾಡಿದರೆ ಉತ್ತಮ ಭವಿಷ್ಯವಿದೆ ಎಂದರು.

ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿ.ಪಂ ಮಾಜಿ ಸದಸ್ಯ ರಾಜಶೇಖರರೆಡ್ಡಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ರೊಣೂರು ಚಂದ್ರ ಶೇಖರ್, ಮುಖಂಡರಾದ ಲಾಯರ್ ಶಿವಾರೆಡ್ಡಿ, ಬಿ.ವಿ.ಶಿವಾರೆಡ್ಡಿ, ಎಸ್.ಎಲ್.ಎನ್ ಮಂಜುನಾಥ್, ವಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲ ರೆಡ್ಡಿ ಇದ್ದರು.