ಬಸವರಾಜ ಬೊಮ್ಮಾಯಿಗೆ ಹೃದಯ ಶಸ್ತ್ರಚಿಕಿತ್ಸೆ
KannadaprabhaNewsNetwork | Published : Oct 18 2023, 01:01 AM IST
ಬಸವರಾಜ ಬೊಮ್ಮಾಯಿಗೆ ಹೃದಯ ಶಸ್ತ್ರಚಿಕಿತ್ಸೆ
ಸಾರಾಂಶ
ಬೊಮ್ಮಾಯಿ ಅವರು ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರೋಗ್ಯದಲ್ಲಿ ಚೇತರಿಕೆ ಆದಷ್ಟು ಶೀಘ್ರ ಗುಣಮುಖನಾಗುವೆ: ಬೊಮ್ಮಾಯಿ ಟ್ವೀಟ್ ಕನ್ನಡಪ್ರಭ ವಾರ್ತೆ ಬೆಂಗಳೂರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಬೊಮ್ಮಾಯಿ ಅವರು ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರಿಗೆ ಹೃದಯಾಘಾತವೇನೂ ಆಗಿರಲಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿದ ವೇಳೆ ಹೃದಯದ ರಕ್ತನಾಳಗಳು ಬ್ಲಾಕ್ ಆಗಿದ್ದು ಕಂಡು ಬಂದಿದೆ. ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆಗೆ ಒಳಗಾದರು ಎಂದು ತಿಳಿದು ಬಂದಿದೆ. ಈ ನಡುವೆ ಬೊಮ್ಮಾಯಿ ಅವರು, ನನಗೆ ಲಘು ಶಸ್ತ್ರ ಚಿಕಿತ್ಸೆಯಾಗಿದ್ದು, ವೈದ್ಯರ ಸಲಹೆ ಮೇರೆಗೆ ಈಗ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದೇನೆ. ಆದಷ್ಟು ಬೇಗ ಸಂಪೂರ್ಣ ಗುಣಮುಖನಾಗಿ ನಿಮ್ಮ ಮುಂದೆ ಬರಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ಕಾರಣ, ನೀವೆಲ್ಲರೂ ಆಸ್ಪತ್ರೆಗೆ ನನ್ನನ್ನು ನೋಡಲು ಬಂದರೇ, ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ನೀವ್ಯಾರು ಆಸ್ಪತ್ರೆಗೆ ಬರಬಾರದೆಂದು ಕಳಕಳಿಯಾಗಿ ಮನವಿ ಮಾಡುತ್ತೇನೆ. ನಿಮ್ಮ ಶುಭ ಹಾರೈಕೆಗಳು ನನ್ನನ್ನು ಮಾನಸಿಕವಾಗಿ ಮತ್ತಷ್ಟು ಗಟ್ಟಿ ಮಾಡಿದ್ದು, ಶೀಘ್ರದಲ್ಲಿಯೇ ಜನಸೇವೆಗೆ ಮರಳುತ್ತೇನೆ. ಶುಭ ಹಾರೈಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದಿಂದ ಅನಂತ ಅನಂತ ಧನ್ಯವಾದಗಳು ಎಂದು ಹೇಳಿದ್ದಾರೆ.