‘ಕಾಲುವೆ ಸ್ವಚ್ಛತೆಗೆ ಹಣ ನೀಡದೇಬ್ರ್ಯಾಂಡ್‌ ಬೆಂಗ್ಳೂರಿಗೆ ಅರ್ಥವಿಲ್ಲ’

| Published : Oct 17 2024, 01:34 AM IST

ಸಾರಾಂಶ

ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹೊಣೆಯನ್ನೂ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಘೋಷಣೆಗೆ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ತಿರುಗೇಟು ನೀಡಿದ್ದಾರೆ.

-ಸಿಟಿಗೆ ಬಳಸಿ-

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹೊಣೆಯನ್ನೂ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಘೋಷಣೆಗೆ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ತಿರುಗೇಟು ನೀಡಿದ್ದಾರೆ.

‘ಬೆಂಗಳೂರಿನಲ್ಲಿ ಮಳೆ ಆರಂಭವಾಗುವ ಮೊದಲೇ ರಾಜಕಾಲುವೆ ಸ್ವಚ್ಚಗೊಳಿಸುವ ಕೆಲಸ ಮಾಡಲು ಬಿಬಿಎಂಪಿಗೆ ಹಣ ನೀಡದೇ ಬ್ರ್ಯಾಂಡ್ ಬೆಂಗಳೂರು ಎಂದರೆ ಪ್ರಯೋಜನವಿಲ್ಲ’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದರೆ, ‘ಬ್ರ್ಯಾಂಡ್‌ ಬದಲು ಬ್ಯಾಂಡ್‌ ಬೆಂಗಳೂರು ಆಗಿದೆ’ ಎಂದು ಅಶೋಕ್‌ ಲೇವಡಿ ಮಾಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಬೊಮ್ಮಾಯಿ, ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾಗುತ್ತಿದೆ. ಈ ಬಗ್ಗೆ ಅನೇಕ ವರದಿಗಳು ಕೂಡ ಇವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸುಮಾರು 800 ಕೋಟಿ ರೂ. ಖರ್ಚು ಮಾಡಿ ರಾಜಕಾಲುವೆ ಸರ್ವೇ ಮಾಡಿಸಿ ಕೆಲಸ ಪ್ರಾರಂಭ ಮಾಡಿದ್ದೇವೆ. ಆ ಕೆಲಸವನ್ನು ಈಗಿನ ಸರ್ಕಾರ ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ಮಳೆ ಬಂದಾಗ ಓಡಾಡುವುದಕ್ಕಿಂತ, ಮಳೆ ಶುರುವಾಗುವ ಮೊದಲೇ ಕಾಲುವೆ ಸ್ವಚ್ಛಗೊಳಿಸುವ ಕೆಲಸ ಆಗಬೇಕು. ತಗ್ಗು ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಿರುವ ಕಟ್ಟಡಗಳು, ಲೇಔಟ್‌ಗಳು, ಅಪಾರ್ಟ್ಮೆಂಟ್‌ಗಳನ್ನು ತೆಗೆಯುವ ಕೆಲಸ ಪ್ರಾರಂಭವಾದಂತೆ ಆಗಿ ನಂತರ ಸ್ಥಗಿತಗೊಳ್ಳುತ್ತದೆ. ಕೆರೆ ಪ್ರದೇಶದಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ ಅದನ್ನು ತೆರವುಗೊಳಿಸುವ ಕಾರ್ಯ ಆಗಬೇಕು. ತಗ್ಗು ಪ್ರದೇಶದ ಬಗ್ಗೆ ಗಮನ ಹರಿಸದೇ ಇದ್ದರೆ ಸಮಸ್ಯೆ ಆಗುತ್ತದೆ. ಈ ಕೆಲಸ ಮಾಡದೇ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಮಾತನಾಡಿದರೆ ಪ್ರಯೋಜನವಿಲ್ಲ. ಕೇವಲ ಪ್ರಚಾರದಿಂದ ಬೆಂಗಳೂರಿನ ಅಭಿವೃದ್ಧಿ ಆಗುವುದಿಲ್ಲ ಎಂದರು.

ಬ್ರ್ಯಾಂಡ್ ಅಲ್ಲ, ಬ್ಯಾಂಡ್‌ ಬೆಂಗಳೂರು- ಅಶೋಕ್‌

ಅಶೋಕ್ ಅವರು ಮಾತನಾಡಿ, ಬೆಂಗಳೂರಿನ ಬೆಳ್ಳಂದೂರು, ಮಹದೇವಪುರ ಮೊದಲಾದ ಕಡೆ ಮಳೆಯಿಂದ ಹಾನಿಯಾಗಿದೆ. ಇಂತಹ ಸಮಯದಲ್ಲೂ ಬ್ರ್ಯಾಂಡ್‌ ಬೆಂಗಳೂರು ಎನ್ನುತ್ತಿದ್ದಾರೆ. ಆದರೆ ಕೇವಲ ಸದ್ದು ಕೇಳಿಬರುತ್ತಿದ್ದು, ಬ್ರ್ಯಾಂಡ್‌ ಬದಲು ಬ್ಯಾಂಡ್‌ ಬೆಂಗಳೂರು ಆಗಿದೆ. ನಿಯಂತ್ರಣ ಕೊಠಡಿ ತೆರೆದಿದ್ದಾರೆಯೇ ಹೊರತು ಯಾವ ಕೆಲಸವೂ ಆಗಿಲ್ಲ. ಗುತ್ತಿಗೆದಾರರಿಗೆ ಬಿಲ್‌ ಬಾಕಿ ಇದೆ. ಒಂದೋ ಬ್ರ್ಯಾಂಡ್‌ ಬೆಂಗಳೂರು ಘೋಷಣೆಯನ್ನು ವಾಪಸ್‌ ಪಡೆಯಲಿ, ಇಲ್ಲವಾದರೆ ಏನು ಮಾಡುತ್ತೇವೆಂದು ಸರಿಯಾದ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.