ಬಿಜೆಪಿ, ಜೆಡಿಎಸ್‌ನ ಗುಂಡಾಗಿರಿ ಸಹಿಸೋಲ್ಲ

| Published : Feb 02 2024, 01:01 AM IST

ಸಾರಾಂಶ

ಗೂಂಡಾಗಿರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ನವರು ಗೂಂಡಾಗಿರಿ ಪ್ರವೃತ್ತಿ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಹೋರಾಟದ ಸ್ವರೂಪ ಬದಲಿಸಬೇಕಾಗುತ್ತದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಂಡ್ಯ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಮೇಲೆ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಕಲ್ಲು ತೂರಿ ಕಿಟಕಿ ಗಾಜುಗಳನ್ನು ಒಡೆದಿದ್ದು, ಇಂತಹ ಪ್ರಚೋದನಕಾರಿ ಕೃತ್ಯಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಅಹಿಂದ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಅಹಿಂದ ಮುಖಂಡ ಹಾಗೂ ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಾಲ್ಫಿನ್ ನಾಗರಾಜ್ ಮಾತನಾಡಿ, ಗೂಂಡಾಗಿರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ನವರು ಗೂಂಡಾಗಿರಿ ಪ್ರವೃತ್ತಿ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟದ ಸ್ವರೂಪ ಬದಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಘಟನೆಗೆ ಪ್ರಚೋದನೆಯೇ ಕಾರಣ

ಗೂಂಡಾಗಿರಿ ಕೃತ್ಯಗಳಲ್ಲಿ ತೊಡಗಿರುವವರನ್ನು ಸರ್ಕಾರ ಈ ಕೂಡಲೇ ಬಂಧಿಸಬೇಕು, ಕಳೆದ ಮಂಗಳವಾರ ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಟಿ. ರವಿಯವರ ನೇತೃತ್ವದಲ್ಲಿ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದ ಹನುಮಧ್ವಜದ ವಿವಾದದ ಪ್ರತಿಭಟನೆಯ ಮೆರವಣಿಗೆ ಸಮಯದಲ್ಲಿ ಮುಖಂಡರು ಪ್ರತಿಭಟನಾಕಾರರನ್ನು ಪ್ರಚೋದಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿದರು.

ಸೇವಾದಳ ಜಿಲ್ಲಾಧ್ಯಕ್ಷ ಹನುಮಂತಪ್ಪ ಮಾತನಾಡಿ, ರಾಜ್ಯದಲ್ಲಿ ಶೋಷಿತ ಸಮುದಾಯದವರು ಭಯ ಮತ್ತು ದಬ್ಬಾಳಿಕೆಯ ವಾತಾವರಣದಿಂದ ಹೊರಬಂದು ಇಂತಹ ನೀಚ ಕೃತ್ಯಗಳ ವಿರುದ್ಧ ಹೋರಾಡುವಷ್ಟು ಶಕ್ತರಾಗಿದ್ದಾರೆ ಎಂದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ಬಳಿಕ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿಯವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕುರುಬರ ಸಂಘದ ತಾಲೂಕು ಅಧ್ಯಕ್ಷ ಎನ್.ಆನಂದ, ನಗರಸಭೆ ಮಾಜಿ ಸದಸ್ಯ ನರೇಂದ್ರಬಾಬು, ವಿಜಯ್ ಕುಮಾರ್, ಎಸ್ ಪಿ, ಶ್ರೀನಿವಾಸ್, ಸೇವಾದಳದ ಪ್ರಧಾನ ಕಾರ್ಯದರ್ಶಿ ಮುನಿರಾಜು, ಅಹಿಂದ ಮುಖಂಡರಾದ ನಾಯನಹಳ್ಳಿ ನಾರಾಯಣಸ್ವಾಮಿ, ನಾಯನಹಳ್ಳಿ ಮಂಜುನಾಥ್, ಮುನೀಂದ್ರ, ಮತ್ತಿತರರು ಇದ್ದರು.