ಸಾರಾಂಶ
ಬೆಂಗಳೂರು : ‘ಯತ್ನಾಳ ಇರಲಿ ಅಥವಾ ಯಾರೇ ಆಗಲಿ. ನಾನು ತಲೆಕೆಡಿಸಿಕೊಳ್ಳಲ್ಲ. ನನ್ನ ಕೆಲಸ ಮಾಡಿಕೊಂಡು ಹೋಗುತ್ತೇನೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ. ಕೆಲಸ ಇಲ್ಲದವರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಟಾರ್ಗೆಟ್ ಮಾಡುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಕೆಲಸ ಮಾಡಲು ಬಂದಿದ್ದೇನೆ, ಕೆಲಸ ಮಾಡಿಕೊಂಡು ಹೋಗುತ್ತೇನೆ ಅಷ್ಟೇ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಯಾರು ಕ್ರಮ ಕೈಗೊಳ್ಳಬೇಕೋ ಅವರು ತೆಗೆದುಕೊಳ್ಳುತ್ತಾರೆ. ಫೆಬ್ರವರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಇದೆ. ಪಕ್ಷದ ಇಂದಿನ ಬೆಳವಣಿಗೆಗಳ ಬಗ್ಗೆ ಕಾರ್ಯಕರ್ತರಲ್ಲಿ ನೋವು ಇದೆ. ಆ ನೋವು ಏನು ಅಂತ ಅರ್ಥ ಆಗುತ್ತದೆ. ಇದೆಲ್ಲದಕ್ಕೂ ಶೀಘ್ರ ಇತೀಶ್ರೀ ಹಾಡುವ ಕೆಲಸ ಹೈಕಮಾಂಡ್ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಡಾ ವಿಚಾರದಲ್ಲಿ ನಡೆದ ಘಟನೆ ಬಳಿಕ ಕಾಂಗ್ರೆಸ್ಸಿನಲ್ಲೇ ಮುಖ್ಯಮಂತ್ರಿ ಆಗುವುದಕ್ಕೆ ಗುದ್ದಾಟ ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದರ ನಡುವೆ ಬಿಜೆಪಿ, ಜೆಡಿಎಸ್ ಪಕ್ಷದ ಶಾಸಕರನ್ನು ಅವರ ಪಕ್ಷಕ್ಕೆ ಸೇರಿಸಿಕೊಂಡು ಏನು ಮಾಡುತ್ತಾರೆ? ಮೊದಲು ಅಭಿವೃದ್ಧಿ ಮಾಡಲಿ. ಕಾನೂನು ಸುವ್ಯವಸ್ಥೆ ಸರಿಪಡಿಸಲಿ. ಅವರಲ್ಲಿರುವ ಶಾಸಕರನ್ನು ಮೊದಲು ಉಳಿಸಿಕೊಳ್ಳಲಿ. ಬಿಜೆಪಿ, ಜೆಡಿಎಸ್ ಪಕ್ಷದವರನ್ನು ಆಮೇಲೆ ಕರೆದುಕೊಳ್ಳಲಿ ಎಂದು ತಿರುಗೇಟು ನೀಡಿದರು.