ಬಿವೈವಿಗೆ 4 ವರ್ಷ ಬಳಿಕ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಬೇಕಿತ್ತು’ : ರಮೇಶ ಜಾರಕಿಹೊಳಿ

| Published : Dec 03 2024, 10:58 AM IST

Ramesh jarkiholi

ಸಾರಾಂಶ

ಶಾಸಕ ಬಿ.ವೈ.ವಿಜಯೇಂದ್ರಗೆ ನಾಲ್ಕು ವರ್ಷದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕಿತ್ತು ಎಂದು ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಬೆಳಗಾವಿ : ಶಾಸಕ ಬಿ.ವೈ.ವಿಜಯೇಂದ್ರಗೆ ನಾಲ್ಕು ವರ್ಷದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕಿತ್ತು ಎಂದು ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಎರಡು ದಿನಗಳ ಹಿಂದೆಯೇ ಶೋಕಾಸ್‌ ನೋಟಿಸ್‌ ಬಂದಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರ. ಆದರೆ, ವಿಜಯೇಂದ್ರ, ಬಿಎಸ್‌ವೈ ಅವರ ಕಾಲಿನ ಧೂಳಿಗೂ ಸಮನಲ್ಲ. ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿ ಅಡ್ಡಾಡುವ ವಯಸ್ಸು ಅವರದ್ದು. ಇನ್ನೂ 4 ವರ್ಷಗಳ ಬಳಿಕ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕಿತ್ತು. ನಾವು ಯತ್ನಾಳ್ ಬೆನ್ನಿಗೆ ನಿಲ್ಲುತ್ತೇವೆ. ಕೇಂದ್ರ ‌ನಾಯಕರ ಮನವೊಲಿಸುತ್ತೇವೆ ಎಂದರು.

ನನ್ನ ಬೆನ್ನಿಗೆ ನಿಲ್ಲುವಂತೆ ವಿಜಯೇಂದ್ರ ಹಿಂದುಳಿದ ನಾಯಕರನ್ನು ಬೆದರಿಸುತ್ತಿದ್ದಾರೆ. ವಿಜಯೇಂದ್ರ ಜೊತೆಯಲ್ಲಿರುವ ಬಹುತೇಕರು ಹಿಂದುಳಿದ‌ ಸಮುದಾಯದವರು. ಲಿಂಗಾಯತ, ಒಕ್ಕಲಿಗರು ಯಾರೂ ಇಲ್ಲ. ಪಾಪ ರೇಣುಕಾಚಾರ್ಯ ರಾಜಕೀಯ ‌ಅಸ್ತಿತ್ವಕ್ಕಾಗಿ ಅವರ ಜೊತೆಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗಬೇಕು ಎಂದು ನಾನು ಬಹಿರಂಗವಾಗಿ ಹೇಳಲ್ಲ. ಇನ್ ಡೋರ್ ಸಭೆ ಮಾಡಿ ಕೇಳಲಿ ಹೇಳುತ್ತೇನೆ ಎಂದು ಹೇಳಿದರು.--

ಯತ್ನಾಳ್‌ ಬೆನ್ನಿಗೆ ನಿಲ್ಲುತ್ತೇವೆ: ಕುಮಾರ ಬಂಗಾರಪ್ಪ ಸ್ಪಷ್ಟನೆ

 ಬೆಳಗಾವಿ : ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್‌ ಜಾರಿ ಮಾಡಿದೆ. ನಾವು ಹೈಕಮಾಂಡ್‌ ನಾಯಕರ ಭೇಟಿ ಮಾಡಿ ಯತ್ನಾಳ್ ಅವರ ಪರವಾಗಿ ಮಾತನಾಡುತ್ತೇವೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್‌ ಬೋರ್ಡ್ ಭೂಕಬಳಿಕೆ ವಿಚಾರವಾಗಿ ನಡೆಯುತ್ತಿರುವ ಹೋರಾಟಕ್ಕೆ ಶೋಕಾಸ್ ನೋಟಿಸ್ ನೀಡಿಲ್ಲ ಅನಿಸುತ್ತದೆ. ನಮ್ಮ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮನವೊಲಿಸುತ್ತೇವೆ. ಬಿಜೆಪಿ ಸಂಘಟನೆಯಲ್ಲಿ ಯತ್ನಾಳ್ ಅವರ ಪಾತ್ರ ಬಹುಮುಖ್ಯವಾಗಿದ್ದು, ನಾವೆಲ್ಲರೂ ಯತ್ನಾಳ್ ಬೆನ್ನಿಗೆ ನಿಲ್ಲುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.