ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಯಲಹಂಕ ತಾಲೂಕು ವ್ಯಾಪ್ತಿಯಲ್ಲಿ ಸ್ವಾಧೀನಪಡಿಸಿಕೊಂಡಿರುವ 43 ಎಕರೆ ಜಮೀನಿನಲ್ಲಿ ಖಾಸಗಿ ಜಂಟಿ ಸಹಭಾಗಿತ್ವದಲ್ಲಿ ಇಂಟಿಗ್ರೇಟೆಡ್ ಹೈಟೆಕ್ ಟೌನ್‌ಶಿಪ್‌ಅನ್ನು 2930 ಕೋಟಿ ರು. ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ.ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಕರ್ನಾಟಕ ಗೃಹ ಮಂಡಳಿಯು ಈ ಟೌನ್‌ಶಿಪ್‌ಗಾಗಿ ಬೆಂಗಳೂರು ಜಿಲ್ಲೆಯ ಯಲಹಂಕ ತಾಲೂಕು ಜಾಲ-1 ಹೋಬಳಿ, ಚಿಕ್ಕಜಾಲ ಹಾಗೂ ಮೀನುಕುಂಟೆ ಗ್ರಾಮದಲ್ಲಿ 43 ಎಕರೆ ಭೂಸ್ವಾಧೀನಪಡಿಸಿಕೊಂಡಿದೆ. ಈ ಜಮೀನಿನಲ್ಲಿ ಶೇ.50:50ರ ಅನುಪಾತದ ಪಾಲುದಾರಿಕೆಯಡಿ ಭೂಮಾಲೀಕರಿಗೆ ಅಭಿವೃದ್ಧಿಪಡಿಸಿದ ಜಾಗ ನೀಡಲು ಹಾಗೂ ಮಂಡಳಿಯ ಪಾಲಿನ ಜಮೀನಿನಲ್ಲಿ ಖಾಸಗಿ ನಿರ್ಮಾಣದಾರರ ಜಂಟಿ ಸಹಭಾಗಿತ್ವದಡಿ ಇಂಟಿಗ್ರೇಟೆಡ್ ಹೈಟೆಕ್ ಟೌನ್‌ಶಿಪ್ ನಿರ್ಮಿಸಲು 2930 ಕೋಟಿ ರು.ಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ ಎಂದರು.
ಅದೇ ರೀತಿ ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ)ಯಡಿ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ರ ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ ಎರಡು ಕಾರಿಡಾರ್‌ಗಳಲ್ಲಿ 37.121 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇದರಲ್ಲಿ ಮೆಟ್ರೋ ವಯಾಡಕ್ಟ್ ಜೊತೆಗೆ ಎಲಿವೇಟೆಡ್ ರಸ್ತೆಯನ್ನು 9700.00 ಕೋಟಿ ರು. ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಅನುಮೋದನೆ ನೀಡಿದೆ. ರಾಜ್ಯ ಸರ್ಕಾರ 2025-26 ನೇ ಸಾಲಿನ ಬಜೆಟ್‌ನಲ್ಲಿ ಒದಗಿಸಲಾದ 4000 ಕೋಟಿ ರು. ಬಜೆಟ್ ಅನುದಾನದ ಮೂಲಕ ಯೋಜನೆಯ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ ಮತ್ತು ಭವಿಷ್ಯದಲ್ಲಿ ಇದೇ ರೀತಿಯ ಅನುದಾನಗಳನ್ನು ನಿರೀಕ್ಷಿಸಲಾಗುತ್ತದೆ ಎಂದು ತಿಳಿಸಿದರು.ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಗರದ ವಿವಿಧ ಸ್ಥಳಗಳಲ್ಲಿ ಹೊಸದಾಗಿ 6 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ ಕಾಮಗಾರಿ ಹಾಗೂ 7 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಯ 956.67 ಕೋಟಿ ರು. ಅಂದಾಜು ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕೆಂಗೇರಿಯ 60 ಎಂ.ಎಲ್.ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು 80 ಎಂ.ಎಲ್.ಡಿ ಸಾಮರ್ಥ್ಯಕ್ಕೆ ಉನ್ನತೀಕರಿಸಲು 28.88 ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.