ರಾಜ್ಯದಲ್ಲಿ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ, ಒಟ್ಟಾರೆ ಮೀಸಲಾತಿಯನ್ನು ಶೇ.50 ರಿಂದ ಶೇ.56ಕ್ಕೆ ಏರಿಕೆ ಮಾಡಿದ್ದ ಸರ್ಕಾರದ ಕ್ರಮ ರದ್ದುಪಡಿಸಿರುವ ಹೈಕೋರ್ಟ್ನ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಬೆಂಗಳೂರು : ರಾಜ್ಯದಲ್ಲಿ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ, ಒಟ್ಟಾರೆ ಮೀಸಲಾತಿಯನ್ನು ಶೇ.50 ರಿಂದ ಶೇ.56ಕ್ಕೆ ಏರಿಕೆ ಮಾಡಿದ್ದ ಸರ್ಕಾರದ ಕ್ರಮ ರದ್ದುಪಡಿಸಿರುವ ಹೈಕೋರ್ಟ್ನ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಈ ಬಗ್ಗೆ ಮುಂದಿನ ಕಾನೂನು ಪ್ರಕ್ರಿಯೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು.
ಬೊಮ್ಮಾಯಿ ಅವಧಿಯ ನಿರ್ಧಾರ:
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಎಸ್ಸಿ ಮೀಸಲಾತಿಯನ್ನು ಶೇ.15 ರಿಂದ ಶೇ.17ಕ್ಕೆ, ಎಸ್ಟಿ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಳ ಮಾಡಿ ಒಟ್ಟಾರೆ ಮೀಸಲಾತಿಯನ್ನು ಶೇ.50 ರಿಂದ ಶೇ.56ಕ್ಕೆ ಹೆಚ್ಚಳ ಮಾಡಲಾಗಿತ್ತು. ಈ ಕ್ರಮವನ್ನು ಈಚೆಗೆ ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿತ್ತು. ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ (ಎಸ್ಎಲ್ಪಿ) ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ.
ಅಲ್ಲದೆ, ಈಗಾಗಲೇ ಮೀಸಲಾತಿ ಹೆಚ್ಚಿಸಿದ ಬಳಿಕ ನಡೆದ ನೇಮಕಾತಿ ಬಗ್ಗೆ ಯಾವ ತೀರ್ಮಾನ ಮಾಡಬೇಕು? ಜತೆಗೆ ಹೆಚ್ಚಿಸಿದ ಮೀಸಲಾತಿ ಪ್ರಮಾಣಕ್ಕೆ ಮಾನ್ಯತೆ ಸಿಗುವಂತೆ ಮಾಡಲು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವುದು ಸೇರಿ ವಿವಿಧ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಕ್ರಮಗಳ ಬಗ್ಗೆ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಚರ್ಚಿಸಿ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ.
ಎಸ್ಎಲ್ಪಿ ಸಲ್ಲಿಸಲು ತೀರ್ಮಾನಿಸಲಾಗಿದೆ
ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಬಗೆಗಿನ ಹೈಕೋರ್ಟ್ ತೀರ್ಪಿಗೆ ಸಂಬಂಧಿಸಿ ಎಸ್ಎಲ್ಪಿ ಸಲ್ಲಿಸಲು ತೀರ್ಮಾನಿಸಲಾಗಿದೆ.
ಮುಂದಿನ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಕ್ರಮಗಳ ಬಗ್ಗೆ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಚರ್ಚಿಸಲಾಗುವುದು. ವಿಶೇಷವಾಗಿ 9ನೇ ಅನುಸೂಚಿಗೆ ಸೇರಿಸುವ ಸಾಧ್ಯತೆ ಸೇರಿದಂತೆ ಮುಂದಿನ ಕ್ರಮಗಳ ಕುರಿತು ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
- ಎಸ್ಸಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ, ಎಸ್ಟಿ ಮೀಸಲನ್ನು ಶೇ.3ರಿಂದ ಶೇ.7ಕ್ಕೆ ಏರಿಸಿದ್ದ ಬಿಜೆಪಿ ಸರ್ಕಾರ
- ಒಟ್ಟಾರೆ ಮೀಸಲು ಶೇ.56ಕ್ಕೆ ಏರಿದ ಹಿನ್ನೆಲೆಯಲ್ಲಿ ಮೀಸಲು ಹೆಚ್ಚಳವನ್ನು ರದ್ದುಗೊಳಿಸಿ ತೀರ್ಪು ನೀಡಿದ್ದ ಹೈಕೋರ್ಟ್
- ತೀರ್ಪಿನ ವಿರುದ್ಧ ಮೇಲ್ಮನವಿಗೆ ನಿರ್ಧಾರ. ಸಂವಿಧಾನದ 9ನೇ ಪರಿಚ್ಛೇದಕ್ಕೆ ಮೀಸಲು ಸೇರಿಸಲು ಕೇಂದ್ರಕ್ಕೆ ಮನವಿ


