ಸಾರಾಂಶ
ನಿನ್ನೆ ಭತ್ತದ ನಾಟಿ ಮಾಡಿದ್ದಾರೆ. ನಾನು ಬೇರೆ ಕಡೆಗೆ ಹೋದಾಗ ಟ್ರ್ಯಾಕ್ಟರ್ ಎಲ್ಲಾ ಓಡಿಸುತ್ತೇನೆ. ಅದನ್ನು ರಾಜಕೀಯ ವಿಚಾರ ಮಾಡುವುದಿಲ್ಲ. ನಾನು ನಾಟಿ ಮಾತ್ರ ಮಾಡುವುದಿಲ್ಲ. ನೇಗಿಲು ಹಿಡಿದು ಉಳುಮೆನೂ ಮಾಡುತ್ತೇನೆ. ಜಿಲ್ಲೆಯ ರೈತರಿಗೆ ಹೊಸ ಮಾದರಿಯಲ್ಲಿ ನಾಟಿ ಮಾಡೋದನ್ನ ಕಲಿಸೋಕೆ ಬಂದಿದ್ದರೇನೋ ಪಾಪ...
ಕನ್ನಡಪ್ರಭ ವಾರ್ತೆ ಮಂಡ್ಯ
ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ಪುನಾರಚನೆ ವಿಷಯ ಚರ್ಚೆಯಲ್ಲೇ ಇಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.ಪಕ್ಷದಲ್ಲಿ ಎಲ್ಲರೂ ಅಧಿಕಾರ ಕೊಡಬೇಕು. ಹೀಗಾಗಿ ಸಂಪುಟ ಪುನಾರಚನೆ ಅಥವಾ ಖಾತೆ ಬದಲಾವಣೆ ಮಾಡೋದು ಸಹಜ. ಆದರೆ, ಈಗ ಆ ವಿಚಾರ ಚರ್ಚೆಯಲ್ಲಿ ಇಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, ನಮ್ಮ ಸ್ನೇಹಿತರು ಹುಟ್ಟು ಸುಳ್ಳುಗಾರರು. ನಾನು ಅವರೊಂದಿಗೇನು ಜಗಳವಾಡಿಲ್ಲ, ಕುಸ್ತಿಯಾಡಿಲ್ಲ. ಇಂಥಾ ಅಭಿವೃದ್ಧಿಯಾಗಬೇಕೆಂದು ನನಗೆ ಹೇಳಲಿ. ನಾನು ಮುಖ್ಯಮಂತ್ರಿ ಅವರ ಬಳಿ ಕುಳಿತು ಮಾತಾಡುತ್ತೇನೆ. ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.ನಾವು ಮಾತನಾಡಿದರೆ ಕುಮಾರಸ್ವಾಮಿ ಅವರ ಹಿಂಬಾಲಕರಿಗೆ ಮೆಣಸಿನಕಾಯಿ ಹಾಕಿದ ಹಾಗೆ ಆಗುತ್ತೆ. ರಾಮನಗರದಲ್ಲಿ ಎಷ್ಟು ಕೆಡಿಪಿ ಸಭೆ ಮಾಡಿದ್ದಾರೆ. ಎಷ್ಟು ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ರಾಜಕೀಯ ಸಭೆ ಮಾಡಿದರೆ ರಾತ್ರಿ 12 ಗಂಟೆಗೆ ಎದ್ದು ಬರುತ್ತಾರೆ ಎಂದು ಟೀಕಿಸಿದರು.
ನಿನ್ನೆ ಭತ್ತದ ನಾಟಿ ಮಾಡಿದ್ದಾರೆ. ನಾನು ಬೇರೆ ಕಡೆಗೆ ಹೋದಾಗ ಟ್ರ್ಯಾಕ್ಟರ್ ಎಲ್ಲಾ ಓಡಿಸುತ್ತೇನೆ. ಅದನ್ನು ರಾಜಕೀಯ ವಿಚಾರ ಮಾಡುವುದಿಲ್ಲ. ನಾನು ನಾಟಿ ಮಾತ್ರ ಮಾಡುವುದಿಲ್ಲ. ನೇಗಿಲು ಹಿಡಿದು ಉಳುಮೆನೂ ಮಾಡುತ್ತೇನೆ. ಜಿಲ್ಲೆಯ ರೈತರಿಗೆ ಹೊಸ ಮಾದರಿಯಲ್ಲಿ ನಾಟಿ ಮಾಡೋದನ್ನ ಕಲಿಸೋಕೆ ಬಂದಿದ್ದರೇನೋ ಪಾಪ.. ಮಂಡ್ಯ ಜನರಿಗೆ ಹುಟ್ಟುತ್ತಲೇ ಭತ್ತ, ಕಬ್ಬು ನಾಟಿ ಮಾಡೋದು ಗೊತ್ತಿದೆ. ಅವರು ಯುವಕರಿಗೆ ಕೆಲಸ ಕೊಡಿಸುತ್ತೇನೆ ಎಂದಿದ್ದಾರೆ. ಕೆಡಿಪಿ ಸಭೆಗೆ ಬರದೇ ಇದ್ದರೂ ಪರವಾಗಿಲ್ಲ. ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸವನ್ನಾದರೂ ಮಾಡಲಿ ಎಂದು ವ್ಯಂಗ್ಯವಾಡಿದರು.ಕುಮಾರಸ್ವಾಮಿ ಬೆಳಗ್ಗೆ ಎದ್ದರೆ ಸಾಕು ಸರ್ಕಾರ ತೆಗೀತೀವಿ ಅಂತಾರೆ. ಅದೇನು ಮಕ್ಕಳ ಆಟನಾ?. ಡಿ.ಕೆ.ಶಿವಕುಮಾರ್
ನಿಂದಿಸುವುದೇ ಕೆಲಸ ಅಂದುಕೊಂಡಿದ್ದಾರಾ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದಾಗ ಅವರ ಜೊತೆ ನಿಂತಿದ್ದು ಒಕ್ಕಲಿಗರೇ. ಮೊದಲ ಬಾರಿಗೆ ಸಿಎಂ ಆದಾಗ ಒಕ್ಕಲಿಗ ಚಲುವರಾಯಸ್ವಾಮಿ ಅವರ ಜೊತೆ ನಿಂತಿದ್ದರು. ಎರಡನೇ ಬಾರಿಗೆ ಸಿಎಂ ಮಾಡಿದ್ದು ಡಿ.ಕೆ.ಶಿವಕುಮಾರ್. ಇದನ್ನು ಅವರು ಮರೆಯಬಾರದು ಎಂದು ತಿರುಗೇಟು ನೀಡಿದರು.