ಬಿಜೆಪಿ ಸೂಚಿಸಿದರೆ ಎಚ್‌ಡಿಕೆ ಪರ ಪ್ರಚಾರ: ಸಂಸದೆ ಸುಮಲತಾ

| Published : Apr 04 2024, 01:00 AM IST / Updated: Apr 04 2024, 05:24 AM IST

ಸಾರಾಂಶ

 ಈ ಚುನಾವಣೆಯಲ್ಲಿ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲೆಲ್ಲಾ ಓಡಾಡುತ್ತೇನೆ. ಕುಮಾರಸ್ವಾಮಿ ಅವರ ಪ್ರಚಾರಕ್ಕೆ ಹೋಗಬೇಕು ಎಂದರೆ ಹೋಗುವೆ.’ - ಸುಮಲತಾ ಅಂಬರೀಶ್

 ಮಂಡ್ಯ : ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ. ಆ ಪಕ್ಷದ ನಿಲುವೇ ನನ್ನ ನಿಲುವು. ಪಕ್ಷ ಸೂಚಿಸಿದರೆ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಬೆಂಬಲಿಗರ ಸಭೆ ಮುಗಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಅವರನ್ನು ಬೆಂಬಲಿಸುವ ವಿಚಾರವಾಗಿ ಈಗಲೇ ನಿರ್ಧಾರ ಮಾಡಲು ಸಾಧ್ಯವಿಲ್ಲ. ಪಕ್ಷಕ್ಕೆ ಮೊದಲು ಸೇರ್ಪಡೆಯಾಗಬೇಕು. ಕೆಲವೇ ದಿನಗಳಲ್ಲಿ ಪಕ್ಷ ಸೇರುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಚುನಾವಣಾ ವಿಚಾರವಾಗಿ ಚರ್ಚೆ ಮಾಡಬೇಡಕಿದೆ. ಈ ಚುನಾವಣೆಯಲ್ಲಿ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲೆಲ್ಲಾ ಓಡಾಡುತ್ತೇನೆ. ಕುಮಾರಸ್ವಾಮಿ ಅವರ ಪ್ರಚಾರಕ್ಕೆ ಹೋಗಬೇಕು ಎಂದರೆ ಹೋಗುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

೫೨ ವರ್ಷದ ಬಳಿಕ ಮಹಿಳಾ ಅಭ್ಯರ್ಥಿಯೊಬ್ಬರು ಮಂಡ್ಯದಲ್ಲಿ ಗೆದ್ದಿದ್ದರು. ಎಲ್ಲ ಸಂದರ್ಭದಲ್ಲೂ ಪಕ್ಷೇತರವಾಗಿ ಸ್ಪರ್ಧಿಸಲು ಸಾಧ್ಯವಿಲ್ಲ. ಬಿಜೆಪಿ ಪಕ್ಷಕ್ಕೆ ಸೇರುತ್ತಿರುವುದರಿಂದ ನನ್ನ ಅವಶ್ಯಕತೆ ಬಗ್ಗೆ ಅವರೇ ಹೇಳಬೇಕು. ಯಾರನ್ನೂ ಜೀವಮಾನದುದ್ದಕ್ಕೂ ದ್ವೇಷಿಸಲಾಗುವುದಿಲ್ಲ. ಕುಮಾರಸ್ವಾಮಿಗೆ ಬೆಂಬಲಿಸುವ ವಿಚಾರವಾಗಿ ದರ್ಶನ್ ಅವರನ್ನೇ ಕೇಳಬೇಕು ಎಂದು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬಿಜೆಪಿ ಸೇರುವ ವಿಚಾರವಾಗಿ ನಾನು ಯಾವುದೇ ಸ್ಥಾನ ಮಾನ ಕೇಳಿಲ್ಲ. ಬಿಜೆಪಿ ಅಂದ ಕೂಡಲೇ ಅನೇಕರು ಚಪ್ಪಾಳೆ ಹೊಡೆದರು. ಕೆಲವರು ಮುನಿಸಿಕೊಂಡು ಹೋಗಿರಬಹುದು. ಪ್ರಸ್ತುತ ಸನ್ನಿವೇಶ ಹಾಗಿದೆ ಎಂದ ಸುಮಲತಾ ಅವರು, ಕುಮಾರಸ್ವಾಮಿ ಅವರು ನಮ್ಮ ಮನೆಗೆ ಸೌಜನ್ಯದ ಭೇಟಿ ನೀಡಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ. ಹಳೆಯ ಘಟನೆ ಮರೆಯಿರಿ ಅಂತ ಮನವಿ ಮಾಡಿದ್ದಾರೆ. ಜೀವನದುದ್ದಕ್ಕೂ ದ್ವೇಷ ಸಾಧಿಸಲು ಸಾಧ್ಯವಿಲ್ಲ. ಸಹಕಾರ ಕೊಡಿ, ಹಳೆಯದನ್ನು ಮರೆಯಿರಿ ಎಂದು ಕೋರಿದ್ದಾರೆ. ಅದಕ್ಕೆ ಸಹಕರಿಸುವುದಾಗಿ ತಿಳಿಸಿದ್ದೇನೆ ಎಂದರು.