ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡೋದಿಲ್ಲ. ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿಗಳು. ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಶನಿವಾರ ಇಲ್ಲಿ ಹೇಳಿದರು.
ಚಿಕ್ಕಬಳ್ಳಾಪುರ : ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡೋದಿಲ್ಲ. ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿಗಳು. ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಶನಿವಾರ ಇಲ್ಲಿ ಹೇಳಿದರು.
ನಗರದ ವಾರ್ಡ್ ನಂಬರ್ 23 ಮತ್ತು 24 ರಲ್ಲಿ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಬಳಿಕ ಮಾತನಾಡಿ, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪನವರ ಮೇಲೆ ಎಫ್‌ಐಆರ್ ಆಗಿಲ್ವಾ, ಬೇಲ್ ಮೇಲೆ ಹೊರಗಿಲ್ವಾ, ವಿಜಯೇಂದ್ರ ಮೇಲೆ ಇಲ್ವಾ, ಅವರು ಮೊದಲು ರಾಜೀನಾಮೆ ಕೊಟ್ಟು ಮೇಲ್ಪಂಕ್ತಿ ಹಾಕಿಕೊಡಲಿ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯಾನಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯರನ್ನು ತುಳಿಯುವ ಯತ್ನ
ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನ ತುಳಿಯಲು ಪ್ರಯತ್ನ ಮಾಡ್ತಿದ್ದಾರೆ. ಅದನ್ನ ನಾವು ಸಹಿಸಲ್ಲ. ಮೊದಲು ಮುಡಾ ಹಗರಣದಲ್ಲಿ ಜೆಡಿಎಸ್ ಕಾರ್ಯಕರ್ತ ಕೋರ್ಟಿಗೆ ಹೋಗಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೈವಾಡ ಇಲ್ಲದೇ ಕೋರ್ಟಿಗೆ ಹೋಗಿದ್ದಾರಾ. ಅವರು ನಮಗೆ ಕಲ್ಲು ಹೊಡೆದರೆ, ನಾವು ಹೂ ಕೊಡಲು ಸಾಧ್ಯವಿಲ್ಲ. ನಾವು ಹೂವಿನೊಂದಿಗೆ ಪಾಟ್ ಅನ್ನು ಅವರ ಮೇಲೆ ಎಸೆಯುತ್ತೇವೆ ಎಂದರು.
ಜಿಲ್ಲಾ ಕೇಂದ್ರವಾಗಿ 18 ವರ್ಷ ಕಳೆದರೂ ಜಿಲ್ಲಾಸ್ಪತ್ರೆಯಲ್ಲಿ ಎಂ.ಆರ್.ಐ.ಸ್ಕ್ಯಾನಿಂಗ್ ಯಂತ್ರ ಇರಲಿಲ್ಲ. ಈಗ ನಮ್ಮ ಸರ್ಕಾರ ಬಂದ ಮೇಲೆ 16 ಕೋಟಿ ರೂಗಳ ವೆಚ್ಚದಲ್ಲಿ ಎಂ.ಆರ್.ಐ.ಸ್ಕ್ಯಾನಿಂಗ್ , ಸಿಟಿ ಸ್ಕ್ಯಾನಿಂಗ್, ಎರಡು ಎಕ್ಸರೆ ಯಂತ್ರಗಳು ಮತ್ತು ಇದರ ಕಟ್ಟಡಕ್ಕೆ 8.2 ಕೋಟಿ ರೂಗಳು ಮೀಸಲಿಡಲಾಗಿದ್ದು, ಮೂರು ದಿನಗಳಲ್ಲಿ ಶಂಕು ಸ್ಥಾಪನೆ ಮಾಡಿ, 2025 ರ ವೇಳೆಗೆ ಜನಬಳಕೆಗೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರ
ನಾಯನಹಳ್ಳಿ, ಪೆರೇಸಂದ್ರ ಗ್ರಾಮಗಳಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಪ್ರಾಥಮಿಕ ಆರೋಗ್ಯ ಕಟ್ಟಡಗಳನ್ನು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ರವರು ಅಕ್ಟೋಬರ್ 5 ರಂದು ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಕುಡಿಯುವ ನೀರಿನ ಯೋಜನೆಯಾದ ಎತ್ತಿನ ಹೊಳೆ ಕಾಮಗಾರಿ ಪೂರ್ಣಗೊಂಡು ನೀರು ಹರಿಯಲು ಬೇಕಾದ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಣ ಬಿಡುಗಡೆ ಮಾಡಿದ್ದಾರೆ ಎಂದರು.
ಇವರಿಬ್ಬರಿಗೂ ನನ್ನ ಮೇಲೆ ಅಭೀಮಾನ ಹೆಚ್ಚು. ಅದಕ್ಕಾಗಿ ನಗರೋತ್ತಾನದಲ್ಲಿ ಹಣ ವಾಪಸ್ಸಾಗಿದ್ದರೂ ₹45 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳ ರಸ್ತೆ ಅಭಿವೃದ್ದಿಗೆ 6 ಕೋಟಿ ರೂ, ಮುನ್ಸಿಪಲ್ ಡಿಗ್ರಿ ಕಾಲೇಜಿಗೆ 6 ಕೋಟಿ.ಮಹಿಳಾ ಕಾಲೇಜಿಗೆ 4 ಕೋಟಿ, ಆ ಮೆಡಿಕಲ್ ಕಾಲೇಜು ಕಾಮಗಾರಿ ಪೂರ್ಣಗೊಳಿಸಲು 300 ಕೋಟಿ ರುಪಾಯಿ ಮೊನ್ನೆಯ ಕ್ಯಾಬಿನೇಟ್‌ನಲ್ಲಿ ಬಿಡುಗಡೆ ಮಾಡಿಸಿದ್ದೇನೆ. ಹೊಸ ಆಸ್ಪತ್ರೆ ಪ್ರಾರಂಭಿಸಲು 80 ಕೋಟಿ ಯೋಜನೆಯ ಪ್ರಸ್ತಾವನೆ ಇದೆ ಎಂದರು.ನಗರದ 4 ದಿಕ್ಕಿಗೆ ಕಮಾನು
ಚಿಕ್ಕಬಳ್ಳಾಪುರ ನಗರಕ್ಕೆ ಬರುವ ನಾಲ್ಕುದಿಕ್ಕುಗಳಲ್ಲಿ ಸ್ವಾಗಕ ಕಮಾನು ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕೊಂದು ಸುಂದರ ಹೆಸರು ಇಡಲು ಕೂಡ ಚಿಂತಿಸಲಾಗಿದೆ. ಆದಷ್ಟು ಬೇಗ ಇದಕ್ಕೆ ಚಾಲನೆ ನೀಡಲಾಗುವುದು. ಹೆದ್ದಾರಿ ಅಗಲೀಕರಣ ಆದ ನಂತರ ಮಹಿಳಾ ಕಾಲೇಜಿನ ಬಳಿ ಬಸ್‌ನಿಲ್ದಾಣ ಮಾಡಿ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ನಗರದ 24 ವಾರ್ಡಿನಲ್ಲಿ ನಿವಾಸಿಗಳು ತಾವು ಎದುರಿಸುತ್ತಿರುವ ರಸ್ತೆ,ಚರಂಡಿ,ಉದ್ಯಾನವನ,ಕಲ್ಯಾಣಿ ಸ್ವಚ್ಛತೆ, ವಿದ್ಯುತ್ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳ ಗಮನಕ್ಕೆ ತಂದ ಶಾಸಕರು ತುರ್ತಾಗಿ ಪರಿಹರಿಸುವಂತೆ ನಿರ್ದೇಶನ ನೀಡಿದರು.ಈ ವಾರ್ಡಿನ ಅಭಿವೃದ್ಧಿ ವಿಚಾರವಾಗಿ ಈಗಾಗಲೇ 14 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.