ಸಾರಾಂಶ
ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ತಮ್ಮ ಆರೋಪದ ಕುರಿತು ಭಾರತಕ್ಕೆ ತಾವು ಯಾವುದೇ ಸಾಕ್ಷ್ಯ ಕೊಟ್ಟಿಲ್ಲಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನೀಡಿದ ಹೇಳಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರ ಟ್ರುಡೋರನ್ನು ತೀವ್ರ ತರಾಟೆ ತೆಗೆದುಕೊಂಡಿದೆ.
ನವದೆಹಲಿ : ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ತಮ್ಮ ಆರೋಪದ ಕುರಿತು ಭಾರತಕ್ಕೆ ತಾವು ಯಾವುದೇ ಸಾಕ್ಷ್ಯ ಕೊಟ್ಟಿಲ್ಲಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನೀಡಿದ ಹೇಳಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರ ಟ್ರುಡೋರನ್ನು ತೀವ್ರ ತರಾಟೆ ತೆಗೆದುಕೊಂಡಿದೆ. ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧ ಹಾಳಾಗಿದ್ದರ ಹೊಣೆ ಟ್ರುಡೋ ಹೊರ ಬೇಕಾಗುತ್ತದೆ ಎಂದು ಬಿಸಿ ಮುಟ್ಟಿಸಿದೆ.
ಭಾರತ ಹಾಗೂ ಭಾರತೀಯ ರಾಜತಾಂತ್ರಿಕರ ವಿರುದ್ಧ ಮಾಡಿದ್ದ ಗಂಭೀರ ಆರೋಪಗಳ ಸಂಬಂಧ ಕೆನಡಾ ಯಾವುದೇ ರೀತಿಯ ಸಾಕ್ಷ್ಯವನ್ನು ಕೊಟ್ಟಿಲ್ಲ ಎಂದು ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದವು. ಈಗ ಟ್ರುಡೋ ನೀಡಿರುವ ಹೇಳಿಕೆಯು ನಮ್ಮ ನಿಲುವನ್ನು ದೃಢೀಕರಿಸಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ವಿವೇಚನಾ ರಹಿತ ನಡವಳಿಕೆ ಯಿಂದಾಗಿ ಭಾರತ- ಕೆನಡಾ ಸಂಬಂಧ ಹಾಳಾಗಿದೆ.
ಅದರ ಹೊಣೆ ಕೆನಡಾ ಪ್ರಧಾನಿ ಟ್ರುಡೋ ಹೊರಬೇಕಾ ಗುತ್ತದೆ ಎಂದು ಸಚಿವಾಲಯ ಟೀಕಿಸಿದೆ. ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಟ್ರುಡೋ ಕಳೆದ ವರ್ಷ ಬಹಿರಂಗ ಆರೋಪ ಮಾಡಿದ್ದರು. ಆದರೆ ಬುಧವಾರ ಕೆನಡಾದ ವಿದೇಶಿ ಹಸ್ತಕ್ಷೇಪ ಸಮಿತಿ ಮುಂದೆ ವಿಚಾರಣೆಗೆ ಹಾಜರಾದ ಅವರು, ತಮ್ಮ ಆರೋಪಕ್ಕೆ ತಾವು ಯಾವುದೇ ರೀತಿಯ ಬಲಿಷ್ಠ ಸಾಕ್ಷ್ಯವನ್ನು ಭಾರತಕ್ಕೆ ಕೊಟ್ಟಿಲ್ಲ. ಗುಪ್ತಚರ ಮಾಹಿತಿ ಆಧರಿಸಿ ಆ ಆರೋಪವನ್ನು ಮಾಡಿದ್ದೆ ಎಂದು ಹೇಳಿಕೆ ನೀಡಿದರು.
ನಿಜ್ಜರ್ ಹತ್ಯೆ ಬಗ್ಗೆ ಭಾರತಕ್ಕೆ ಸಾಕ್ಷ್ಯ ನೀಡಿಲ್ಲ: ಕೆನಡಾ ಪ್ರಧಾನಿ ಟ್ರುಡೋ
ಆಗಿದ್ದು ಏನು?:
• ಕಳೆದ ವರ್ಷ ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದಿದ್ದ ಕೆನಡಾ ಪ್ರಧಾನಿ ಟ್ರುಡೋ
• ಈ ಬಗ್ಗೆ ಭಾರತ ಸರ್ಕಾರಕ್ಕೆ ಸಾಕ್ಷ್ಯವನ್ನೂ ನೀಡಿದ್ದೇವೆ ಎಂದು ಪದೇ ಪದೇ ಹೇಳಿಕೆ
• ಆದರೆ, ಕೆನಡಾ ಸರ್ಕಾರ ಸಾಕ್ಷ್ಯ ನೀಡಿಲ್ಲ ಎಂದು ಪ್ರತಿಪಾದಿಸಿದ್ದ ಭಾರತ ಸರ್ಕಾರ
• ಪ್ರಕರಣದಿಂದ ಇತ್ತೀಚೆಗಷ್ಟೇ ಭಾರತ, ಕೆನಡಾ ದ್ವಿಪಕ್ಷೀಯ ಸಂಬಂಧ ಅಂತ್ಯ
• ಸಂಸದೀಯ ಸಮಿತಿ ವಿಚಾರಣೆ ವೇಳೆ ಸಾಕ್ಷ್ಯ ನೀಡಿಲ್ಲ ಎಂದು ಟ್ರುಡೋ ಯೂಟರ್ನ್