ಲೋಕಸಭಾ ಚುನಾವಣೆ: 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಭವಿಷ್ಯ

| Published : Apr 28 2024, 01:18 AM IST / Updated: Apr 28 2024, 04:39 AM IST

ಸಾರಾಂಶ

ಕೇಂದ್ರ ಸರ್ಕಾರ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬಾರದಾಗಿತ್ತು. ಸಮಯಕ್ಕೆ ಸರಿಯಾಗಿ ನಾವು ಮನವಿ ಮಾಡಿದರೂ ರಾಜ್ಯದ 223 ತಾಲೂಕುಗಳಲ್ಲಿ ಬರ ಇದ್ದರೂ ಬರ ಪರಿಹಾರ ಇಷ್ಟೊಂದು ವಿಳಂಬವಾಗಿ ಹಣ ಬಿಡುಗಡೆ ಮಾಡಿದೆ

 ಶಿಡ್ಲಘಟ್ಟ :  ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಕೂಡ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ. ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ವಿ.ರಾಜೀವ್ ಗೌಡ ಹೇಳಿದರು .

ತಾಲೂಕಿನಲ್ಲಿ ಇತ್ತೀಚೆಗೆ ನಿಧನರಾದ ಪರಿಸರ ಪ್ರೇಮಿ ಬೆಳ್ಳೂಟಿ ಸಂತೋಷ್ ರವರ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.

ಖಾಲಿ ಚೊಂಬಿಗೆ ಬೆದರಿದ ಕೇಂದ್ರ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನ ಅಧಿಕಾರ ಕೊಡಲಿಲ್ಲ ಅಂತ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಮೇಲೆ ದ್ವೇಷ ಸಾಧಿಸುವ ಕೆಲಸ ಮಾಡುತ್ತಿದೆ ಕಾಂಗ್ರೆಸ್ ನಡೆಸುತ್ತಿರುವ ಖಾಲಿ ಚೊಂಬಿನ ಅಭಿಯಾನಕ್ಕೆ ಕೇಂದ್ರ ಸರ್ಕಾರ ಬೆದರಿದೆ ಎಂದರು. ಬರ ಪರಿಹಾರ ಬಿಡುಗಡೆ ಮಾಡಿರುವ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬಾರದಾಗಿತ್ತು.

 ಸಮಯಕ್ಕೆ ಸರಿಯಾಗಿ ನಾವು ಮನವಿ ಮಾಡಿದರೂ ರಾಜ್ಯದ 223 ತಾಲೂಕುಗಳಲ್ಲಿ ಬರ ಇದ್ದರೂ ಬರ ಪರಿಹಾರ ಇಷ್ಟೊಂದು ವಿಳಂಬವಾಗಿ ನೀಡುವುದು ಎಷ್ಟು ಮಾತ್ರ ಸರಿ ಎಂದು ರಾಜೀವ್‌ಗೌಡ ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಮಾತನಾಡಿ, ಬೆಳ್ಳೂಟಿ ಸಂತೋಷ್ ಇತರರಿಗೆ ಮಾದರಿ ಆಗುವ ಕೆಲಸವನ್ನು ಸದಾ ಮಾಡಿಕೊಂಡು ಬದ್ಧತೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಅಕಾಲಿಕ ಮರಣ ನಿಜಕ್ಕೂ ನಮಗೆ ಬೇಸರ ಮೂಡಿಸಿದೆ. ಶಿಕ್ಷಣ, ಆರೋಗ್ಯ, ಪರಿಸರ ಕ್ಷೇತ್ರಗಳಲ್ಲಿ ಅವರು ಸದಾ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಜನಪರವಾಗಿ ಕೆಲಸ ಮಾಡಿಕೊಂಡಿದ್ದರೆಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಮುಖ್ಯ ವಕ್ತಾರರು ಎ.ಎನ್. ನಟರಾಜ್ ಗೌಡ , ಆನಂದ್ ಪ್ರಸಾದ್ , ನಾಗೇಶ್ ಗೌಡ , ಹೊಸಪೇಟೆ ಶಶಿಕುಮಾರ್ , ಆನೂರು ದೇವರಾಜ್ , ರಾಜಣ್ಣ , ಪ್ರಮೋದ್ , ಮುನಿರಾಜು , ರಮೇಶ್ , ವೆಂಕಟೇಶ್ , ರಾಜ್ ಕುಮಾರ್ ಮತ್ತಿತರರು ಹಾಜರಿದ್ದರು..