ಸಾರಾಂಶ
ಚನ್ನಪಟ್ಟಣ ಚುನಾವಣೆಯಲ್ಲಿ ಇಂಥವರೇ ಅಭ್ಯರ್ಥಿ ಎಂದು ಹೇಳಲಾಗದು. ಸಿ.ಪಿ.ಯೋಗೇಶ್ವರ ಅವರು ನಮ್ಮವರು. ಅಲ್ಲಿ 70 ಸಾವಿರ ಜೆಡಿಎಸ್ ಮತಗಳಿವೆ. ಒಬ್ಬ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವ್ಯವಸ್ಥೆ ಮಾಡುತ್ತೇವೆ.
ಕೆರೂರ : ಚನ್ನಪಟ್ಟಣ ಚುನಾವಣೆಯಲ್ಲಿ ಇಂಥವರೇ ಅಭ್ಯರ್ಥಿ ಎಂದು ಹೇಳಲಾಗದು. ಸಿ.ಪಿ.ಯೋಗೇಶ್ವರ ಅವರು ನಮ್ಮವರು. ಅಲ್ಲಿ 70 ಸಾವಿರ ಜೆಡಿಎಸ್ ಮತಗಳಿವೆ. ಒಬ್ಬ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವ್ಯವಸ್ಥೆ ಮಾಡುತ್ತೇವೆ. ಅದನ್ನು ಮೈತ್ರಿ ಪಕ್ಷದ ವರಿಷ್ಠರು ಆಯ್ಕೆ ಮಾಡುತ್ತಾರೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿ ತಿಳಿಸಿದರು.
ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಗುರುವಾರ ಬೃಂದಾವನ ಹೋಟೆಲ್‌ಗೆ ಭೇಟಿ ನೀಡಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಡಾದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ನಿಯ ಹೆಸರಿನಲ್ಲಿ ಪಡೆದುಕೊಂಡಿದ್ದಾರೆ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಈ ಹಗರಣದಿಂದ ಮುಕ್ತ ಆಗುವವರೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಾಮಾಣಿಕ ತನಿಖೆಗೆ ಸಹಕರಿಸಲಿ ಎಂದು ಹೇಳಿದರು.
ಹಿಂದೆ ಮಾಜಿ ಸಿ.ಎಂ.ಯಡಿಯೂರಪ್ಪನವರ ಲೋಕಾಯುಕ್ತ ಪ್ರಕರಣದಲ್ಲಿ ಇದೇ ಸಿದ್ದರಾಮಯ್ಯನವರು ಅವರ ರಾಜೀನಾಮೆಗೆ ಒತ್ತಾಯಿಸಿದ್ದನ್ನು ನೆನಪಿಸಿಕೊಳ್ಳಬೇಕು. ಈಗ ಘಟನೆ ಮರುಕಳಿಸಿದ್ದು ಸಿದ್ದರಾಮಯ್ಯನವರು ರಾಜೀನಾಮೆ ನೀಡಲೇಬೇಕು ಎಂದು ಒತ್ತಾಯಿಸಿದರು.
ಪಕ್ಷದ ಸಂಘಟನೆಗೆ ಒತ್ತು:
ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸಂಘಟನೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಬಾಗಲಕೋಟೆಯಲ್ಲಿ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಪಕ್ಷ ಸಂಘಟನೆಗೆ ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಕಾರ ನಾವು ಕೊಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಸುರೇಶ ಬಾಬು, ಟಿ.ಎ. ಶರವನ, ಹಾಲ್ಕೋಡ ಹನಮಂತಪ್ಪ, ವೀರಭದ್ರಪ್ಪ ಹಾಲರವಿ, ಕೆ.ವಿ. ಚಂದ್ರಶೇಖರ, ಟೋಪೇಶ ಬದಾಮಿ, ಭದ್ರಪ್ಪ ಜಲಗೇರಿ, ರಮೇಶ ಕೊಣ್ಣೂರ, ಮಂಜುನಾಥ ಪತ್ತಾರ, ಮೊದಲಾದವರಿದ್ದರು.
ಮುಡಾ ಹಗರಣದಲ್ಲಿ ಹೈಕೋರ್ಟ್ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶ ಎತ್ತಿಹಿಡಿದಿದೆ. ಮೈತ್ರಿ ಪಕ್ಷಗಳ ಹೋರಾಟಕ್ಕೆ ಸಂದ ಜಯವಾಗಿದೆ. ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು.
-ನಿಖಿಲ ಕುಮಾರಸ್ವಾಮಿ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ