ಸಾರಾಂಶ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯೇ ಕಣಕ್ಕೆ ಇಳಿಯಲಿದ್ದಾರೆ ಎಂದು ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಹೊಳೆನರಸೀಪುರ : ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯೇ ಕಣಕ್ಕೆ ಇಳಿಯಲಿದ್ದಾರೆ ಎಂದು ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಬಿದರಕ್ಕ ಗ್ರಾಮದ ಕೊಳಲು ಗೋಪಾಲಕೃಷ್ಣ ನೂತನ ದೇವಾಲಯದ 48ನೇ ದಿನದ ಮಂಡಲ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಇನ್ನು 2-3 ದಿನದಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿ ಆದ ಮೇಲೆ ನಾನೂ ಜೆಡಿಎಸ್ ಅಭ್ಯರ್ಥಿ ಆಗಲೇಬೇಕಲ್ವ?. ಆದ್ದರಿಂದ ನಾನೇ ಅಭ್ಯರ್ಥಿಎಂದು ಹೇಳಿದ್ದೇನೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆಯೊಂದಿಗೆ ದೆಹಲಿಯ ನಾಯಕರ ಜತೆ ಚರ್ಚೆ ಮಾಡಿ, ಅಂತಿಮ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ. ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದರು.
ಸ್ಪರ್ಧೆಯಲ್ಲಿ ಹಲವರ ಹೆಸರುಗಳು ಇವೆ. ಈಗಾಗಲೇ ಕ್ಷೇತ್ರದ ಮತದಾರರು, ಕಾರ್ಯಕರ್ತರ ಪ್ರತಿಕ್ರಿಯೆ, ಭಾವನೆಗಳನ್ನು ತಿಳಿದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದರು. ಚನ್ನಪಟ್ಟಣ ಹಾಗೂ ಹಾಸನ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ. ಯಾರು ಏನೇ ಮಾಡಿದರೂ ಈ ಭದ್ರಕೋಟೆಯನ್ನು ಅಲ್ಲಾಡಿಸಲು ಆಗಲ್ಲ. ಮುಂದಿನ ದಿನಗಳಲ್ಲಿ ಈ ಭದ್ರಕೋಟೆ ಇನ್ನಷ್ಟು ಬಿಗಿಯಾಗಿ ನಿಲ್ಲಲು ಏನೇನು ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತೀವಿ ಎಂದರು.