ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ: ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್‌

| Published : Apr 21 2024, 02:18 AM IST / Updated: Apr 21 2024, 06:10 AM IST

ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ: ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್‌
Share this Article
  • FB
  • TW
  • Linkdin
  • Email

ಸಾರಾಂಶ

 ಭೀಕರ ಬರಗಾಲವಿರುವ ಜಿಲ್ಲೆಗಳಿಗೆ ನೀರಾವರಿ ಸಚಿವರು ಎಷ್ಟು ಕೋಟಿ ಖರ್ಚು ಮಾಡಿದ್ದಾರೆ. ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ, ಇದೇನಾ ಮತ ಹಾಕಿದ ಜನರಿಗೆ ನೀವು ಕೊಡುವ ಆಡಳಿತ. ಕಾಂಗ್ರೆಸ್ 25 ಗ್ಯಾರಂಟಿಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸಹಿ ಹಾಕಿಸಿ ಮನೆಮನೆಗೆ ಹಂಚುತ್ತಿದ್ದಾರೆ.

 ಮಂಡ್ಯ :  ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುವುದನ್ನೇ ಕಾಂಗ್ರೆಸ್‌ ಕಾಯಕ ಮಾಡಿಕೊಂಡಿದೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಹರಿಯಾಯ್ದರು.

ಗ್ಯಾರಂಟಿಯನ್ನು ನಂಬಿ ಮತ ಹಾಕಿದ ಬಡವರು ಪರಿತಪಿಸುತ್ತಿದ್ದಾರೆ, ಗೃಹ ಜ್ಯೋತಿ ಹೆಸರಿನಲ್ಲಿಯೂ ಜನರಿಗೆ ಪರಿಪೂರ್ಣವಾಗಿ ವಿದ್ಯುತ್ ಉಚಿತವಾಗಿ ನೀಡದೇ ವಾರ್ಷಿಕ ಸರಾಸರಿ ಮೀಟರ್ ಲೆಕ್ಕಹಾಕಿ ಹೆಸರಿನಲ್ಲಿ ಮೋಸ ಮಾಡಿದ್ದೀರಾ, ಅನ್ನಭಾಗ್ಯದಲ್ಲಿಯೂ ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿಯನ್ನು ತಮ್ಮದೇ ಸರ್ಕಾರದ್ದು ಎನ್ನುವ ಮೂಲಕ ಅಲ್ಲಿಯೂ ಮೋಸ ಮಾಡಿದ್ದೀರಾ, ಯುವ ನಿಧಿ ಎನ್ನುತ್ತೀರಾ ಯಾವ ಯುವಕರಿಗೆ ನೀವು ಕೊಟ್ಟಿದ್ದೀರಾ, ಒಟ್ಟಿನಲ್ಲಿ ಗ್ಯಾರಂಟಿ ಯೋಜನೆಯೇ ಸುಳ್ಳು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಕಾಂಗ್ರೆಸ್‌ನಲ್ಲಿ ಬಹುತೇಕ ಸಚಿವರು ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಲು ಯಾರೂ ಸ್ಪರ್ಧೆಗಿಳಿದಿಲ್ಲ. ಬದಲಿಗೆ ತಮ್ಮ ಮಕ್ಕಳನ್ನು ಕರೆತಂದು ಚುನಾವಣೆಯಲ್ಲಿ ನಿಲ್ಲಿಸಿರುವುದು ದುರಂತ, ಈ ಹಿಂದೆ ಕ್ಷೀರಾ ಭಾಗ್ಯ, ಅನ್ನಭಾಗ್ಯ, ಶಾದಿ ಭಾಗ್ಯ ತಂದರು ಸಹ ಕೇವಲ 78 ಸೀಟುಗಳನ್ನು ಮಾತ್ರ ಪಡೆದಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಸುಳ್ಳು ಹೇಳುವ ಮೂಲಕ 138 ಸೀಟುಗಳನ್ನು ಪಡೆದರು. ಜನರು ಕಾಂಗ್ರೆಸ್‌ ಗ್ಯಾರಂಟಿಗಳನ್ನು ನಂಬಿ ಮೋಸ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಒಂದು ಅಭಿವೃದ್ಧಿ ಕೆಲಸವೂ ಆಗಿಲ್ಲ, ಭೀಕರ ಬರಗಾಲವಿರುವ ಜಿಲ್ಲೆಗಳಿಗೆ ನೀರಾವರಿ ಸಚಿವರು ಎಷ್ಟು ಕೋಟಿ ಖರ್ಚು ಮಾಡಿದ್ದಾರೆ. ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ, ಇದೇನಾ ಮತ ಹಾಕಿದ ಜನರಿಗೆ ನೀವು ಕೊಡುವ ಆಡಳಿತ. ಕಾಂಗ್ರೆಸ್ 25 ಗ್ಯಾರಂಟಿಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸಹಿ ಹಾಕಿಸಿ ಮನೆಮನೆಗೆ ಹಂಚುತ್ತಿದ್ದಾರೆ. ಮಹಿಳೆಯರಿಗೆ ಒಂದು ಲಕ್ಷ ರು. ಕೊಡುವುದಾಗಿಯೂ ಹೇಳಿದ್ದಾರೆ. ಮೊದಲು ಸತ್ಯ ಹೇಳಿ, ಪಕ್ಕದ ತಮಿಳುನಾಡಿನವರು ಮೇಕೆದಾಟು ಯೋಜನೆಗೆ ತಡೆ ನೀಡುತ್ತೇವೆ ಎನ್ನುವ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನು ಇಲ್ಲಿನ ಕಾಂಗ್ರೆಸ್‌ ಸರ್ಕಾರ ಖಂಡಿಸಿಲ್ಲ. ತೆಲಂಗಾಣದಲ್ಲಿ ರೈತ ಸಾಲ ಮನ್ನಾ ಮಾಡುತ್ತೇವೆಂದು ಕಾಂಗ್ರೆಸ್ ಹೇಳಿದೆ, ನಮ್ಮಕಾಂಗ್ರೆಸ್ಸಿಗರಿಗೆ ಇಲ್ಲಿರುವ ರೈತರು ಕಣ್ಣಿಗೆ ಕಾಣಲಿಲ್ಲವೇ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 16 ಸಾವಿರ ಕೋಟಿ ರು.ನಷ್ಟು ಸಾಲ ಮನ್ನಾ ಮಾಡಿದ್ದೇವೆ, ಮಂಡ್ಯದಲ್ಲಿ 709 ಕೋಟಿ ಸಾಲ ಮನ್ನಾ ಮಾಡಿರುವುದರಿಂದ 1.5 ಲಕ್ಷ ಕುಟುಂಬಗಳಿಗೆ ಅನುಕೂಲವಾಗಿದೆ. ನೀವು ದೇಶದ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದಾರೆ. ಆದರೆ, ಕರ್ನಾಟಕದಲ್ಲಿ ಏಕೆ ಸಾಲ ಮನ್ನಾ ಯೋಜನೆಯಿಲ್ಲ. ಇಂತಹ ಕಾಂಗ್ರೆಸ್ ಡಂಗೂರದ ನಾಟಕಗಳು ಜನರ ಬಳಿ ನಡೆಯಲ್ಲ ಎಂದು ವ್ಯಂಗ್ಯವಾಡಿದರು.

ಮುಖಂಡರಾದ ಡಿ.ಜಯರಾಂ, ಸಿ.ಎಂ.ನಾಗರಾಜು, ಸಿದ್ದಾಚಾರಿ, ಶ್ರೀಧರ್ ಇದ್ದರು.