ಸಾರಾಂಶ
ಕೋಲಾರ : ರಾಜ್ಯದಲ್ಲಿ ಲೂಟಿಕೋರರ ಸರ್ಕಾರ ಅಧಿಕಾರದಲ್ಲಿ ಇದೆ, ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಜನರನ್ನು ವಂಚಿಸುತ್ತಿದೆ ಎಂದು ಸಂಸದ ಡಿ.ವಿ.ಸದಾನಂದಗೌಡ ಟೀಕಿಸಿದರು.
ನಗರದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಬಿಜೆಪಿ-ಜೆಡಿಎಸ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗುವ ರೀತಿಯಲ್ಲಿ ಫಲಿತಾಂಶ ಬರಬೇಕು, ಶಿಕ್ಷಕರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಅದು ವೈ.ಎ.ನಾರಾಯಣಸ್ವಾಮಿ ಅವರಿಗೆ ಮಾತ್ರ, ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ವೈಎಎನ್ ಮಾಡುತ್ತಾರೆ ಎಂದು ತಿಳಿಸಿದರು.
ಶಿಕ್ಷಕರ ಹೆಸರಿಲ್ಲಿ ಕೈ ರಾಜಕೀಯಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಮಾತನಾಡಿ, ಕೋಲಾರ ಜಿಲ್ಲೆಯು ಶ್ರಮಿಕರ, ಬಂಗಾರದ ನಾಡು, ಈ ಭಾಗದ ಅಭಿವೃದ್ಧಿಗಾಗಿ ಬಿಜೆಪಿ, ಜೆಡಿಎಸ್ ಅಪಾರ ಕೊಡುಗೆ ನೀಡಿದೆ. ಎರಡು ಪಕ್ಷಗಳ ಸಮ್ಮಿಶ್ರ ಸರ್ಕಾರ ಇದ್ದಾಗ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ.
ಬಡ್ತಿ, ವೇತನ ಸೇರಿದಂತೆ ಹಲವಾರು ಕ್ರಾಂತಿ ಕಾರಿ ಬದಲಾವಣೆಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಲಾಗಿದೆ ಎಂದು ಹೇಳಿದರು.ಶಿಕ್ಷಕರ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿದ್ದೆ ಕಾಂಗ್ರೆಸ್ ಸಾಧನೆ, ಶಿಕ್ಷಕರ ಹಿತ ಕಾಪಾಡಲಿಲ್ಲ. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ಪದ್ದತಿಯನ್ನು ರದ್ದು ಮಾಡಿತು, ಗುಣಮಟ್ಟ ಶಿಕ್ಷಣ ಜಾರಿಗೆ ತರಲು ಮುಂದಾಗಲಿಲ್ಲ. ಆ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಿನ್ನಡೆಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಶಾಲೆ ಬಳಿ ಮಾದಕ ವಸ್ತು ಮಾರಾಟ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ವರ್ಷವಾಗಿದ್ದು, ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಶಾಲಾ ಕಾಲೇಜು ಆವರಣದಲ್ಲಿ ಮಾದಕ ವಸ್ತು ಮಾರಾಟ ನಡೆಯುತ್ತಿದ್ದು. ತಮ್ಮ ಮಕ್ಕಳ ಭವಿಷ್ಯದ ಕುರಿತು ಆತಂಕಗೊಂಡಿರುವ ರಾಜ್ಯದ ಜನರು ರೋಸಿ ಹೋಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳನ್ನು ನಾಶ ಮಾಡುವ ಸಂಚು ಸದ್ದಿಲ್ಲದೇ ನಡೆಸುತ್ತಿದ್ದಾರೆ, ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳು ಸಾಕಷ್ಟು ಖಾಲಿ ಇವೆ. ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದ್ದು, ಶಿಕ್ಷಣ ಇಲಾಖೆಯ ಬಗ್ಗೆ ಕಾಳಜಿಯಿಲ್ಲದವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದ್ದಾರೆ.
ಪ್ರಾಮಾಣಿಕವಾಗಿ ಸಂಕಷ್ಟಗಳನ್ನು ಬಗೆಬಹರಿಸುವ ವಾತಾವರಣ ಯಾವುದೇ ಇಲಾಖೆಯಲ್ಲಿ ಇಲ್ಲವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿಯನ್ನು ಲಘುವಾಗಿ ಪರಿಗಣಿಸಬೇಡಿ, ಸರ್ಕಾರದ ಪ್ರಭಾವ ಬೀರಿ ಮತಗಳಿಸಲು ಮುಂದಾಗಿದ್ದಾರೆ, ಎರಡೂ ಪಕ್ಷದ ಮುಖಂಡರು ಜವಾಬ್ದಾರಿಯಿಂದ ಕೆಲಸ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.
ಮುಂಗೋಪ ಬಿಟ್ಟು ಅಭ್ಯರ್ಥಿ ಗೆಲ್ಲಿಸಿಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಲೋಕಸಭೆ ಚುನಾವಣೆ ಮಾದರಿಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡೊಣ. ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮುಂಗೋಪ ಬಿಡಬೇಕು, ದೇವೇಗೌಡ, ಕುಮಾರಸ್ವಾಮಿ ಗರಡಿಯಲ್ಲಿ ಬೆಳೆಯುತ್ತಿರುವ ನಾವು ಮೋಸ ಮಾಡುವುದಿಲ್ಲ ಎಂದು ಹೇಳಿದರು.
ಶೀಘ್ರದಲ್ಲೇ ಜಿ.ಪಂ, ತಾ.ಪಂ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಎಂಎಲ್ಸಿ ಚುನಾವಣೆಯು ಅದಕ್ಕೆ ದಿಕ್ಸೂಚಿಯಾಗಬೇಕು. ಎಂಎಲ್ಸಿ ವ್ಯಾಪ್ತಿಯು ಜಾಸ್ತಿಯಿರುವುದರಿಂದ ಅಭ್ಯರ್ಥಿ, ಮುಖಂಡರು ಮಾತನಾಡಿಸಿಲ್ಲ ಎಂದು ಭಿನ್ನಾಭಿಪ್ರಾಯಗಳು ಬಿಟ್ಟು ಬೆಂಬಲ ನೀಡಬೇಕು ಎಂದು ಸಲಹೆ ನೀಡಿದರು.
ಇಂತಹ ದರಿದ್ರ ಸರ್ಕಾರನ ಕಂಡಿಲ್ಲ:ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಐದು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ, ರಾಜ್ಯದಲ್ಲಿರುವ ಕೆಟ್ಟ ದರಿದ್ರ ಸರ್ಕಾರವನ್ನು ಎಂದು ಕಂಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸಭೆ ಚುನಾವಣೆಗೂ ಮುಂಚೆ ಮೈತ್ರಿ ಮಾಡಿಕೊಂಡಿದಿದ್ದರೆ ರಾಜ್ಯದಲ್ಲಿ ನಾವು ಅಧಿಕಾರದಲ್ಲಿ ಇರುತ್ತಿದ್ದೇವು. ಮುಖಂಡರು ಬಹಳ ತಡವಾಗಿ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ಶೂನ್ಯ, ಯಾವ ಇಲಾಖೆಯಲ್ಲೂ ಹಣ ಇಲ್ಲವಾಗಿದೆ, ಅಭಿವೃದ್ಧಿ ಕೆಲಸಗಳ ಟೆಂಡರ್ ಕರೆದರು ಗುತ್ತಿಗೆದಾರರು ಕಾಮಗಾರಿ ನಡೆಸಲು ಮುಂದಾಗುತ್ತಿಲ್ಲ. ದುಡ್ಡೆಲ್ಲ ಗ್ಯಾರಂಟಿಗಳಿಗೆ ಹೋಗುತ್ತಿದೆ ಎಂದು ಟೀಕಿಸಿದರು.
ಶಿಕ್ಷಕರ ಧ್ವನಿಯಾಗಿ ನಿಲ್ಲುವೆಆಗ್ನೇಯ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಶಿಕ್ಷಕರ ಧ್ವನಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ, ಜೆಡಿಎಸ್ ಸರ್ಕಾರ ಬಂದಾಗಲೆಲ್ಲಾ ಶಿಕ್ಷಕರ ಪರವಾಗಿ ಕೆಲಸಗಳು ನಡೆದಿವೆ, ಕಾಂಗ್ರೆಸ್ ಸರ್ಕಾರ ಬಂದು ವರ್ಷವಾಗಿದ್ದರೂ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿಲ್ಲ ಎಂದರು. ಕ್ಷೇತ್ರಕ್ಕೂ ಕಾಂಗ್ರೆಸ್ಸಿಗೂ ಸಂಬಂಧವಿಲ್ಲವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಶಿಕ್ಷಕರ ಕ್ಷೇತ್ರಕ್ಕೂ ಕಾಂಗ್ರೆಸ್‌ಗೆ ಯಾವುದೇ ಸಂಬಂಧ ಇಲ್ಲ. ಅವರು ಯಾವತ್ತೂ ಗೆದ್ದಿಲ್ಲ. ವೈ.ಎನ್.ನಾರಾಯಣಸ್ವಾಮಿ ಸದನದಲ್ಲಿ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತಿದ್ದಾರೆ. ಅವರು ಮತ್ತೆ ಸದನದಲ್ಲಿ ಇರಬೇಕೆಂದರೆ ಒಂದೂ ಓಟು ಕೈತಪ್ಪಬಾರದು ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಲೋಕಸಭಾ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ವೈ.ಸಂಪಂಗಿ, ಮಂಜುನಾಥ್ ಗೌಡ, ವೆಂಕಟಮುನಿವೆಂಕಟಪ್ಪ, ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮುಖಂಡರಾದ ಜಿ.ಇ.ರಾಮೇಗೌಡ, ಎಸ್.ಬಿ.ಮುನಿವೆಂಕಟಪ್ಪ, ವಕ್ಕಲೇರಿ ರಾಮು, ವಾಸುದೇವ್, ಓಂಶಕ್ತಿ ಚಲಪತಿ, ವಡಗೂರು ರಾಮು, ಬೆಗ್ಲಿ ಸೂರ್ಯಪ್ರಕಾಶ್, ವಿಜಯಕುಮಾರ್, ಕೆ.ಬಿ.ಗೋಪಾಲಕೃಷ್ಣ, ಸಿ.ಎಂ.ಆರ್.ಶ್ರೀನಾಥ್, ಸಿ.ಡಿ.ರಾಮಚಂದ್ರ, ಬಣಕನಹಳ್ಳಿ ನಟರಾಜ್, ಡಾ.ಬಾಬು ಮೌನಿ, ಮಾಗೇರಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್ ಇದ್ದರು.
)
;Resize=(128,128))
;Resize=(128,128))