ನಾನು ರಾಚಯ್ಯನವರ ಪ್ರಾಡಕ್ಟ್‌ : ಅವರ ಮಾರ್ಗದರ್ಶನದಂತೆ ಶೋಷಿತರ ಪರವಾಗಿದ್ದೇನೆ- ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Aug 11 2024, 01:35 AM IST / Updated: Aug 11 2024, 04:18 AM IST

Siddaramaiah
ನಾನು ರಾಚಯ್ಯನವರ ಪ್ರಾಡಕ್ಟ್‌ : ಅವರ ಮಾರ್ಗದರ್ಶನದಂತೆ ಶೋಷಿತರ ಪರವಾಗಿದ್ದೇನೆ- ಮುಖ್ಯಮಂತ್ರಿ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬಹುತೇಕ ಕಾಂಗ್ರೆಸ್ ಮುಖಂಡರು ಮಾಜಿ ರಾಜ್ಯಪಾಲ ರಾಚಯ್ಯನವರ ಪ್ರಾಡಕ್ಟ್‌ಗಳು. ನಾನು ಸಹ ರಾಚಯ್ಯನವರ ಪ್ರಡಾಕ್ಟ್‌ ಆಗಿದ್ದು, ಅವರು ಹಾಕಿಕೊಟ್ಟ ಮಾರ್ಗದರ್ಶನದಂತೆ ಶೋಷಿತರ ಪರವಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

 ಚಾಮರಾಜನಗರ : ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬಹುತೇಕ ಕಾಂಗ್ರೆಸ್ ಮುಖಂಡರು ಮಾಜಿ ರಾಜ್ಯಪಾಲ ರಾಚಯ್ಯನವರ ಪ್ರಾಡಕ್ಟ್‌ಗಳು. ನಾನು ಸಹ ರಾಚಯ್ಯನವರ ಪ್ರಡಾಕ್ಟ್‌ ಆಗಿದ್ದು, ಅವರು ಹಾಕಿಕೊಟ್ಟ ಮಾರ್ಗದರ್ಶನದಂತೆ ಶೋಷಿತರ ಪರವಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಆಲೂರಿನಲ್ಲಿ ನಿರ್ಮಿಸಲಾಗಿರುವ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಸ್ಮಾರಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ರಾಚಯ್ಯ ಅವರು ಅತ್ಯಂತ ಮುತ್ಸದ್ದಿ ರಾಜಕಾರಣಿ. ಹೆಚ್ಚು ಮಾತಾಡುತ್ತಿರಲಿಲ್ಲ. ಬಡವರ ಪರವಾಗಿದ್ದ ಅವರು ರಾಮಕೃಷ್ಣ ಹೆಗಡೆ ಮಂತ್ರಿಮಂಡಲದಲ್ಲಿ ಪ್ರಭಾವಿಯಾಗಿದ್ದರು. ಜನಪರ ಕಾಳಜಿಯುಳ್ಳ ರಾಜಕಾರಣಿಗಳನ್ನು ಬೆಳೆಸುವ ಗುಣ ಇತ್ತು. ಹೆಗಡೆ ಮತ್ತು ರಾಚಯ್ಯ ಅವರು ನನ್ನನ್ನು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ಬಳಿಕ ನನ್ನನ್ನು ಮಂತ್ರಿ ಮಾಡಿದರು. ಅವತ್ತು ಮಂತ್ರಿಯಾಗದೇ ಹೋಗಿದ್ದರೆ ಇವತ್ತು 2ನೇ ಬಾರಿ ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ ಎಂದು ಇತಿಹಾಸ ಸ್ಮರಿಸಿದರು.

ರಾಚಯ್ಯ ಸ್ಮಾರಕದಲ್ಲಿ ಐಎಎಸ್‌ ಮತ್ತು ಐಪಿಎಸ್‌ ತರಬೇತಿ ಕೇಂದ್ರ ಸ್ಥಾಪಿಸಲು ಸರ್ಕಾರದ ನೆರವು ನೀಡುವಂತೆ ಶಾಸಕ ಕೃಷ್ಣಮೂರ್ತಿ ಮನವಿ ಮಾಡಿದ್ದು, ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದರು.

ನಮಗೆ ತಂಗಳು ಇತ್ತೆ ಹೊರತು ಇಡ್ಲಿ-ದೋಸೆ ಇರ್ತಿರಲಿಲ್ಲ: ನಮ್ಮ ಮನೆಯಲ್ಲಿ ತಂಗಳು ಇರ್ತಿತ್ತೇ ಹೊರತು, ಇಡ್ಲಿ, ದೋಸೆ, ಉಪ್ಪಿಟ್ಟು ಏನೂ ಇರ್ತಾ ಇರ್ಲಿಲ್ಲ. ರಾತ್ರಿ ಉಳಿದ ಮುದ್ದೆಗೆ ಮಜ್ಜಿಗೆ ಹಾಕಿಕೊಂಡು ತಂಗಳು ತಿಂತಾ ಇದ್ವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ದಿನಗಳನ್ನು ಸ್ಮರಿಸಿಕೊಂಡರು. ಮಾಜಿ ರಾಜ್ಯಪಾಲ ಬಿ.ರಾಯಚ್ಯ ಅವರ ಸ್ಮಾರಕ‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಭಾಷಣ ಪ್ರಾರಂಭಿಸಿದಾಗ ಸಂಜೆ 4 ಗಂಟೆ ಆಗಿತ್ತು. ಈ ವೇಳೆ ಸಮಾರಂಭಕ್ಕೆ ಬಂದವರಿಗೆ ಊಟದ ಸಮಯ ತಡವಾಗಿದ್ದನ್ನು ಪ್ರಸ್ತಾಪಿಸಿ ಕ್ಷಮೆ ಕೋರಿ ಭಾಷಣ ಆರಂಭಿಸಿದ ಸಿದ್ದರಾಮಯ್ಯ ಅವರು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು. ರಾಚಯ್ಯ ಅವರ ಮನೆಯಲ್ಲೂ ಇಡ್ಲಿ ದೋಸೆ ಇರ್ತಿರಲಿಲ್ಲ. ಅವರೂ ನನ್ನಂಗೆ ತಂಗಳು ತಿಂದು ಗಟ್ಟಿಯಾಗಿದ್ದರು ಎಂದು ಸಿಎಂ ಹೇಳಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಕೆ.ವೆಂಕಟೇಶ್, ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ್, ರಾಚಪ್ಪ ಅವರ ಪತ್ನಿ ಗೌರಮ್ಮ, ಸಂಸದ ಸುನಿಲ್ ಬೋಸ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್, ಎಂ.ಆರ್.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ ಉಪಸ್ಥಿತರಿದ್ದರು.