ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ತಿಹಾರ್‌ ಜೈಲಿಗೆ

| Published : Apr 02 2024, 01:09 AM IST / Updated: Apr 02 2024, 04:29 AM IST

kejri

ಸಾರಾಂಶ

ಮದ್ಯ ಲೈಸೆನ್ಸ್‌ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಏ.15ರವರೆಗೂ ನ್ಯಾಯಾಂಗ ವಶಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಸೋಮವಾರ ಆದೇಶಿಸಿದೆ

ನವದೆಹಲಿ: ಮದ್ಯ ಲೈಸೆನ್ಸ್‌ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಏ.15ರವರೆಗೂ ನ್ಯಾಯಾಂಗ ವಶಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಅದರ ಬೆನ್ನಲ್ಲೇ ಕೇಜ್ರಿವಾಲ್‌ ಅವರನ್ನು ತಿಹಾರ್‌ ಜೈಲಿಗೆ ರವಾನಿಸಲಾಗಿದೆ. ಅವರನ್ನು 2ನೇ ನಂಬರ್‌ ಜೈಲಿನಲ್ಲಿಡಲಾಗಿದ್ದು, ಮುಂದಿನ 24 ಗಂಟೆಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗುವುದು ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ.

ತನ್ನ ವಶದ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಅವರನ್ನು ಇ.ಡಿ ಅಧಿಕಾರಿಗಳು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆಗೆ ಕೇಜ್ರಿವಾಲ್‌ ಸಹಕರಿಸುತ್ತಿಲ್ಲ. ಹೀಗಾಗಿ ಅವರನ್ನು ಮತ್ತೆ 15 ದಿನಗಳ ಕಾಲಕ್ಕೆ ವಶಕ್ಕೆ ಒಪ್ಪಿಸಬೇಕು ಎಂದು ಮನವಿ ಮಾಡಿದರು. ಅದನ್ನು ನ್ಯಾಯಾಲಯ ಪುರಸ್ಕರಿಸಿತು. ಇದೇ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್‌, ಮೋದಿ ಏನು ಮಾಡುತ್ತಿದ್ದಾರೋ ಅದು ದೇಶಕ್ಕೆ ಒಳ್ಳೆಯದಲ್ಲ ಎಂದರು.

3 ಪುಸ್ತಕಕ್ಕೆ ಬೇಡಿಕೆ: ಇದೇ ವೇಳೆ ಜೈಲಿನೊಳಗೆ ಓದಲು ತಮಗೆ ರಾಮಾಯಣ, ಭಗವದ್ಗೀತೆ ಮತ್ತು ಪತ್ರಕರ್ತೆ ನೀರಜಾ ಚೌಧರಿ ಬರೆದಿರುವ 6 ಮಾಜಿ ಪ್ರಧಾನಿಗಳ ಕುರಿತಾದ ‘ಹೌ ಪ್ರೈ ಮಿನಿಸ್ಟರ್‌ ಡಿಸೈಡ್ಸ್‌’ ಪುಸ್ತಕಗಳನ್ನು ಒದಗಿಸುವಂತೆ ಕೋರಿದರು.

ಎಷ್ಟೇ ದಿನ ಜೈಲಲ್ಲಿ ಇಟ್ಟರೂ ಸಿಎಂ ಹುದ್ದೆ ಬಿಡಲ್ಲ: ಕೇಜ್ರಿವಾಲ್‌ ಅವರನ್ನೇ ಎಷ್ಟೇ ದಿನ ಜೈಲಲ್ಲಿ ಇಟ್ಟರೂ ಅವರೇ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯಲ್ಲ. ಅವರೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂದು ಆಮ್‌ಆದ್ಮಿ ಪಕ್ಷ ಸ್ಪಷ್ಟಪಡಿಸಿದೆ.

ತಿಹಾರ್‌ ಸೇರಿದ ನಾಲ್ಕನೇ ಆಪ್‌ ನಾಯಕ: ಭ್ರಷ್ಟಾಚಾರ ಪ್ರಕರಣದಲ್ಲಿ ಈಗಾಗಲೇ ಮಾಜಿ ಸಚಿವ ಸತ್ಯೇಂದ್ರ ಜೈನ್‌, ಮನೀಶ್‌ ಸಿಸೋಡಿಯಾ, ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ತಿಹಾರ್‌ ಜೈಲು ಸೇರಿದ್ದರು. ಇದೀಗ ಅವರ ಸಾಲಿಗೆ ಕೇಜ್ರಿವಾಲ್‌ ಕೂಡಾ ಸೇರಿದ್ದಾರೆ.

ಕೇಜ್ರಿ ಪತ್ನಿ ಸುನಿತಾಗೆ ಮಹತ್ವದ ಹುದ್ದೆ?: ಭಾನುವಾರ ರಾಮ್‌ಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗುವ ಮೂಲಕ ರಾಜಕೀಯ ಪಾದಾರ್ಪಣೆ ಮಾಡಿದ್ದ ಕೇಜ್ರಿವಾಲ್‌ ಅವರ ಪತ್ನಿ ಸುನಿತಾಗೆ ಶೀಘ್ರವೇ ಪಕ್ಷದಲ್ಲಿ ಮಹತ್ವದ ಹುದ್ದೆ ನೀಡುವ ಸಾಧ್ಯತೆ ಇದೆ ಎಂದು ಆಮ್‌ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ.