ಸಾರಾಂಶ
ಗೋಧ್ರಾ ಘಟನೆಯಾದ ಸಂದರ್ಭದಲ್ಲಿ ಪ್ರಕರಣ ದಾಖಲಾದಾಗ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಯವರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು : ಗೋಧ್ರಾ ಘಟನೆಯಾದ ಸಂದರ್ಭದಲ್ಲಿ ಪ್ರಕರಣ ದಾಖಲಾದಾಗ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಯವರಿಗೆ ತಿರುಗೇಟು ನೀಡಿದ್ದಾರೆ.
ಮುಡಾ ಪ್ರಕರಣದ ಕುರಿತು ಹರಿಯಾಣ ಚುನಾವಣಾ ಪ್ರಚಾರದ ವೇಳೆ ಮೋದಿ ಉಲ್ಲೇಖಿಸಿರುವುದು ಹಾಗೂ ಬಿಜೆಪಿ ನಾಯಕರು ರಾಜೀನಾಮೆ ಕೇಳಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಎಚ್.ಡಿ.ಕುಮಾರಸ್ವಾಮಿಯವರು ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಇದ್ದಾರೆ. ಅವರು ರಾಜೀನಾಮೆ ನೀಡಿದ್ದಾರಾ? ಅವರು ರಾಜೀನಾಮೆ ನೀಡದೆ ಸರ್ಕಾರದಲ್ಲಿ ಮುಂದುವರೆದರೆ ಅವರ ಸರ್ಕಾರಕ್ಕೆ ಮುಜುಗರ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಅಲ್ಲದೆ, ಪ್ರಕರಣವನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ. ನಾನು ರಾಜೀನಾಮೆ ಕೊಡುವುದಿಲ್ಲ ಎಂದು ಸ್ಪಷ್ಪಪಡಿಸಿದರು.
ರಾಜೀನಾಮೆ ಅಗತ್ಯವಿಲ್ಲ- ಡಿಕೆಶಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರ ಪ್ರಸ್ತಾಪಿಸುವ ಮೂಲಕ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರ ಸರ್ಕಾರದ ಸಚಿವರು ಅನೇಕ ಪ್ರಕರಣಗಳ ತನಿಖೆ ಎದುರಿಸುತ್ತಿದ್ದಾರೆ. ಮೊದಲು ಅವರನ್ನು ಸಚಿವ ಸಂಪುಟದಿಂದ ಕೈಬಿಡಲಿ. ನಂತರ ಬೇರೆ ವಿಚಾರ ಚರ್ಚೆ ಮಾಡಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕ. ಇಲ್ಲಿ ನಮ್ಮ ಸರ್ಕಾರ ಇರುವುದನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿಯವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹಳ್ಳಿಯಿಂದ ದೆಹಲಿವರೆಗೂ ಕಾಂಗ್ರೆಸ್ ಪಕ್ಷ ನಮ್ಮ ಮುಖ್ಯಮಂತ್ರಿ ಪರವಾಗಿ ನಿಲ್ಲಲಿದೆ. ಪಕ್ಷದ ಅಧ್ಯಕ್ಷನಾಗಿ ನಾನು ಈ ಮಾತು ಹೇಳುತ್ತಿದ್ದೇನೆ. ಬಿಜೆಪಿ ಹಾಗೂ ಜೆಡಿಎಸ್‌ನವರು ರಾಜಕೀಯ ಷಡ್ಯಂತ್ರ ರೂಪಿಸುತ್ತಿದ್ದು, ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿರುವುದು ವಿರೋಧ ಪಕ್ಷಗಳಗೆ ಸಹಿಸಲು ಆಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.