ಸಾರಾಂಶ
ವಿಧಾನಸೌಧ, ವಿಕಾಸಸೌಧ ಮತ್ತು ಸುವರ್ಣಸೌಧ ಜನರ ಸಮಸ್ಯೆಗಳನ್ನು ಪರಿಹರಿಸುವ ದೇಗುಲಗಳು. ಇಲ್ಲಿಗೆ ನಮ್ಮನ್ನು ಆರಿಸಿ ಕಳುಹಿಸಿದ ಜನರ ಸಮಸ್ಯೆಗಳನ್ನು ಪರಿಹರಿಸಲು ನ್ಯಾಯಯುತವಾಗಿ ಕೆಲಸ ಮಾಡುವುದು ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು : ವಿಧಾನಸೌಧ, ವಿಕಾಸಸೌಧ ಮತ್ತು ಸುವರ್ಣಸೌಧ ಜನರ ಸಮಸ್ಯೆಗಳನ್ನು ಪರಿಹರಿಸುವ ದೇಗುಲಗಳು. ಇಲ್ಲಿಗೆ ನಮ್ಮನ್ನು ಆರಿಸಿ ಕಳುಹಿಸಿದ ಜನರ ಸಮಸ್ಯೆಗಳನ್ನು ಪರಿಹರಿಸಲು ನ್ಯಾಯಯುತವಾಗಿ ಕೆಲಸ ಮಾಡುವುದು ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧಕ್ಕೆ ನೂತನವಾಗಿ ಅಳವಡಿಸಿರುವ ಶಾಶ್ವತ ದೀಪಾಲಂಕಾರವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿ, ವರನಟ ಡಾ.ರಾಜ್‌ಕುಮಾರ್ ಅವರು ಅಭಿಮಾನಿಗಳೇ ದೇವರು ಅಂತ ಹೇಳುತ್ತಿದ್ದರು. ಅಂದರೆ ಜನರೇ ದೇವರುಗಳು. ರಾಜಕಾರಣಿಗಳನ್ನು ಪ್ರಜಾಪ್ರಭುತ್ವದ ದೇವಾಲಯಗಳಿಗೆ ಆರಿಸಿ ಕಳುಹಿಸುವವರು ಜನರು. ಅವರ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಲು ಇಲ್ಲಿ ಕೂತು ಕೆಲಸ ಮಾಡುವ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ವಿಧಾನಸೌಧಕ್ಕೆ ಈವರೆಗೆ ರಾಷ್ಟ್ರೀಯ ಹಬ್ಬಗಳ ದಿನಗಳಲ್ಲಿ ಮಾತ್ರ ದೀಪಾಲಂಕಾರ ಮಾಡಲಾಗುತ್ತಿತ್ತು. ಸ್ಪೀಕರ್ ಯು.ಟಿ.ಖಾದರ್ ಅವರು ವಿಶೇಷ ಕಾಳಜಿ ವಹಿಸಿ ಶಾಶ್ವತ ದೀಪಾಲಂಕಾರದ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ವಾರಾಂತ್ಯದಲ್ಲಿ ದೀಪಾಲಂಕಾರ ವ್ಯವಸ್ಥೆ ಇದೆ. ಇದು ಶಕ್ತಿಸೌಧದ ಮೆರುಗು ಹೆಚ್ಚಿಸಲಿದೆ. ವಿಧಾನಸೌಧದ ದೀಪಾಲಂಕಾರ ನೋಡಲು ಸಾಕಷ್ಟು ಮಂದಿ ಬರುತ್ತಿದ್ದಾರೆ. ಸಂಜೆ ನಂತರ ವರ್ಣರಂಜಿತವಾಗಿ ಕಾಣುವುದರಿಂದ ಸೌಧದ ಆಕರ್ಷಣೆ ಹೆಚ್ಚಾಗಿದೆ. ಇದಕ್ಕಾಗಿ ಸ್ಪೀಕರ್ ಅವರಿಗೆ ಸರ್ಕಾರದ ಪರವಾಗಿ ಸಿಎಂ ಅಭಿನಂದಿಸಿದರು.
ಕೆಂಗಲ್ ಹನುಮಂತಯ್ಯ ಸ್ಮರಣೆ:
ವಿಧಾನಸೌಧ ನಮ್ಮ ರಾಜ್ಯದ ಹೆಮ್ಮೆಯ ಕಟ್ಟಡ. ಇಂಥ ವಿನ್ಯಾಸ ಇಡೀ ದೇಶದಲ್ಲಿ ಎಲ್ಲೂ ಸಿಗುವುದಿಲ್ಲ. ಇದಕ್ಕೆ ಕಾರಣಕರ್ತರು ಕೆಂಗಲ್ ಹನುಮಂತಯ್ಯ ಅವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.
1951ರಲ್ಲಿ ವಿಧಾನಸೌಧಕ್ಕೆ ಅಂದಿನ ಪ್ರಧಾನಿ ನೆಹರೂ ಅವರು ಅಡಿಗಲ್ಲು ಹಾಕಿದರು. ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರು ಈ ಶಕ್ತಿಸೌಧ ನಿರ್ಮಾಣ ಮಾಡಿದರು. ಆದರೆ, 1956ರಲ್ಲಿ ಇದರ ಉದ್ಘಾಟನೆ ಆಗುವಾಗ ಹನುಮಂತಯ್ಯನವರೇ ಇರಲಿಲ್ಲ. ದೇಶ, ವಿದೇಶಗಳ ಅನೇಕ ಮಾದರಿಯ ವಿನ್ಯಾಸಗಳಿದ್ದರೂ ಕೆಂಗಲ್ ಹನುಮಂತಯ್ಯನವರು ರಾಜ್ಯದ ವಿನ್ಯಾಸದಲ್ಲೇ ವಿಧಾನಸೌಧ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದರು. ಇಂತಹ ಕಟ್ಟಡ ಎಲ್ಲೂ ನೋಡಲು ಸಿಗುವುದಿಲ್ಲ. ನಮ್ಮ ವಿಧಾನಸೌಧ ನಮ್ಮ ಹೆಮ್ಮೆ ಎಂದು ಹೊಗಳಿದರು.
ವಿಧಾನಸೌಧದ ಮೆರುಗು ಹೆಚ್ಚಳ
ಸರ್ವರಿಗೂ ಸಮಾನತೆ, ಸಮಸಮಾಜದ ನಿರ್ಮಾಣ ನಮ್ಮ ಸಂವಿಧಾನದ ಮೂಲ ಆಶಯ. ಅದು ಸಾಕಾರವಾಗಬೇಕಾದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ, ನೆಮ್ಮದಿ, ಶಾಂತಿ, ಸಹನೆ ಸಿಗುವಂತಾಗಬೇಕು. ಅದಕ್ಕಾಗಿಯೇ ಕೆಂಗಲ್ ಹನುಮಂತಯ್ಯನವರು ಸರ್ಕಾರದ ಕೆಲಸ ದೇವರ ಕೆಲಸ ಎಂದು ವಿಧಾನಸೌಧದ ಮೇಲೆ ಬರೆಸಿದ್ದಾರೆ. ಈ ಮಾತನ್ನು ಸಾರ್ಥಕಗೊಳಿಸುವ ರೀತಿಯಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಚಿವರಾದ ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.