ಮೊಳಗಿದ ಕಾಂಗ್ರೆಸ್‌ ಪ್ರಜಾಧ್ವನಿ ರಣಕಹಳೆ

| Published : Apr 07 2024, 01:55 AM IST / Updated: Apr 07 2024, 04:43 AM IST

ಸಾರಾಂಶ

ಬಿಜೆಪಿಯವರು ನಮಗೆ ಮೋಸ ಮಾಡಿಬಿಟ್ಟರು. ಮೊದಲು ಅಕ್ಕಿ ಕೊಡುತ್ತೇವೆ ಎಂದಿದ್ದರು. ಆಮೇಲೆ ಕೊಡೋದಿಲ್ಲ ಎಂದು ಹೇಳಿದರು. ಮೋಸ ಮಾಡಿ ಅಕ್ಕಿಯನ್ನೇ ಕೊಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

 ಕೋಲಾರ/ಮುಳಬಾಗಲು ; ಬಿಜೆಪಿಯವರು ನಮಗೆ ಮೋಸ ಮಾಡಿಬಿಟ್ಟರು. ಮೊದಲು ಅಕ್ಕಿ ಕೊಡುತ್ತೇವೆ ಎಂದಿದ್ದರು. ಆಮೇಲೆ ಕೊಡೋದಿಲ್ಲ ಎಂದು ಹೇಳಿದರು. ಮೋಸ ಮಾಡಿ ಅಕ್ಕಿಯನ್ನೇ ಕೊಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜೊತೆ ಶನಿವಾರ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ‘ಪ್ರಜಾಧ್ವನಿ 2.0’ಕ್ಕೆ ಚಾಲನೆ ನೀಡುವ ಮೂಲಕ ಕಾಂಗ್ರೆಸ್‌ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಬಳಿಕ, ತಮ್ಮ ಪ್ರಚಾರ ಭಾಷಣದುದ್ದಕ್ಕೂ ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ ಸಿಎಂ, ಬಿಜೆಪಿಯವರು ಹೇಳಿದಂತೆ ನಡೆದುಕೊಂಡಿದ್ದಾರಾ? ಮೋದಿ ಹತ್ತು ವರ್ಷಗಳಲ್ಲಿ ನುಡಿದಂತೆ ನಡೆದುಕೊಂಡರಾ? ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು? ಆದರೆ, ಯಾವುದನ್ನೂ ಜಾರಿಗೊಳಿಸಿಲ್ಲ ಎಂದರು.

15ನೇ ಹಣಕಾಸು ಆಯೋಗದವರು 5,498 ಕೋಟಿ ವಿಶೇಷ ಅನುದಾನ ಕೊಡ್ತೀವಿ ಅಂದ್ರು, ಕೊಟ್ಟಿಲ್ಲ. ಬರ ಪರಿಹಾರದ ಹಣ ನಯಾಪೈಸೆ ಬಂದಿಲ್ಲ. ಕೇಂದ್ರ ಬಜೆಟ್‌ನಲ್ಲಿ 5,300 ಕೋಟಿ ಕೊಡುವುದಾಗಿ ಹೇಳಿದ್ದರು. ಫೆರಿಫೆರಲ್ ರಿಂಗ್ ರೋಡ್ ಹಾಗೂ ಕೆರೆಗಳ ಅಭಿವೃದ್ಧಿಗೆ ತಲಾ 3,000 ಕೋಟಿ ರು. ಕೊಡುವುದಾಗಿ ಹೇಳಿದ್ದರು. ಅದನ್ನೂ ಕೊಡಲಿಲ್ಲ ಎಂದು ಆರೋಪಿಸಿದರು.

ಆದರೆ, ನಾವು ನುಡಿದಂತೆ ನಡೆದಿದ್ದೇವೆ. ಮಾತು ಕೊಟ್ಟಂತೆ ಗ್ಯಾರಂಟಿ ಜಾರಿಗೊಳಿಸಿದ್ದೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಐದೂ ವರ್ಷಗಳ ಕಾಲ ಅವುಗಳನ್ನು ಮುಂದುವರಿಸುತ್ತೇವೆ. ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ವ್ಯವಸ್ಥೆ ದಿವಾಳಿಯಾಗಲಿದೆ ಎಂದಿದ್ದರು. ನಾವು ಗ್ಯಾರಂಟಿ ಜಾರಿಗೊಳಿಸಿಲ್ಲವಾ? ಜೊತೆಗೆ, ಅಭಿವೃದ್ಧಿ ಯೋಜನೆಗಳನ್ನೂ ಕೈಗೊಂಡಿದ್ದೇವೆ. ಬಿಜೆಪಿಯವರಂತೆ ನಾವು ಸುಳ್ಳು ಹೇಳಿಲ್ಲ. ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಭರವಸೆ ನೀಡಿದರು.

ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಪತನ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಸರ್ಕಾರಕ್ಕೆ 136 ಶಾಸಕರ ಬೆಂಬಲವಿದೆ. 43% ಮತ ಬಂದಿದೆ. ಬಿಜೆಪಿಗೆ 36% ಮತ ಬಂದಿದ್ದು, 64 ಶಾಸಕರು ಗೆದ್ದಿದ್ದಾರೆ. ಸರ್ಕಾರ ಪತನ ಸಾಧ್ಯನಾ ಎಂದು ಪ್ರಶ್ನಿಸಿದರು. ಬಿಜೆಪಿಯಿಂದಲೇ ಇನ್ನಷ್ಟು ಮುಖಂಡರು ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದರು.

ಇದೇ ವೇಳೆ, ಜೆಡಿಎಸ್‌ ವಿರುದ್ಧವೂ ವಾಗ್ದಾಳಿ ನಡೆಸಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಕೈಜೋಡಿಸಿದ್ದು, ಅವರೂ ಕೋಮುವಾದಿಗಳಾಗುತ್ತಿದ್ದಾರೆ ಎಂದು ಆರೋಪಿಸಿದರು.

ಬೃಹತ್‌ ರೋಡ್‌ ಶೋ:

ಇದಕ್ಕೂ ಮೊದಲು, ಬೆಂಗಳೂರಿನಿಂದ ಹೆಲಿಕಾಪ್ಟರ್‌ ಮೂಲಕ ಆಗಮಿಸಿದ ಸಿಎಂ, ಕುರುಡುಮಲೆಯ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಮುಳಬಾಗಿಲಿಗೆ ತೆರಳಿ, ಪಟ್ಟಣದಲ್ಲಿರುವ ಪುರಾತನ ದರ್ಗಾಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಬಳಿಕ, ನಗರದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ನಂತರ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಂಬೇಡ್ಕರ್ ವೃತ್ತದಿಂದ ಸೌಂದರ್ಯ ಸರ್ಕಲ್ ವರೆಗೆ ತೆರೆದ ವಾಹನದಲ್ಲಿ 1 ಕಿಮೀ. ಬೃಹತ್‌ ರೋಡ್ ಶೋ ನಡೆಸಿದರು. ರೋಡ್ ಶೋನಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾಗಿದ್ದವು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವ ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಎಂ.ಸಿ.ಸುಧಾಕರ್ ಸೇರಿದಂತೆ ಹಲವು ಮುಖಂಡರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಆದರೆ, ಕೋಲಾರದಲ್ಲಿ ತಮ್ಮ ಅಭ್ಯರ್ಥಿಗೆ ಟಿಕೆಟ್‌ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಸಚಿವ ಕೆ.ಎಚ್‌.ಮುನಿಯಪ್ಪ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.