ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ತಮಗೆ ಯಾವುದೇ ಟೆನ್ಷನ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಮುಖಂಡರ ಆರೋಪಗಳಿಗೆ ತಿರುಗೇಟು ನೀಡಿದ ಅವರು, ತಮ್ಮ ಸಾಮಾನ್ಯ ಶೈಲಿಯಲ್ಲೇ ಇರುವುದಾಗಿ ಹೇಳಿದ್ದಾರೆ.
ಮೈಸೂರು : ‘ನಾನು ಯಾವುದೇ ಟೆನ್ಷನ್‌ನಲ್ಲಾಗಲಿ, ಆತಂಕದಲ್ಲಾಗಲಿ ಇಲ್ಲ. ನನ್ನನ್ನು ನೋಡಿದ್ರೆ ಟೆನ್ಷನ್ ಇರೋ ರೀತಿ ಕಾಣ್ತೀನಾ?. ನಾನು ಯಾವಗಾಲೂ ಇದೇ ರೀತಿ ಇರುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಟೆನ್ಷನ್‌ನಲ್ಲಿದ್ದಾರೆಂಬ ಬಿಜೆಪಿ ಮುಖಂಡರ ಆರೋಪಕ್ಕೆ ತಿರುಗೇಟು ನೀಡಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಹೇಳಬಾರದಷ್ಟು ಸುಳ್ಳನ್ನು ನನ್ನ ವಿರುದ್ಧ ಹೇಳಿದ್ದಾರೆ. ಹೀಗಾಗಿ ನಾನು ಟೆನ್ಷನ್‌ನಲ್ಲಿದ್ದೇನೆ ಎಂದು ಹೇಳುತ್ತಿದ್ದಾರೆ ಅಷ್ಟೆ. ನಾನು ಯಾವತ್ತು ಹೇಗಿರುತ್ತೇನೆಯೋ ಅದೇ ರೀತಿ ಇದ್ದೇನೆ ಎಂದು ತಿರುಗೇಟು ನೀಡಿದರು.
ಚಾಮುಂಡಿರೇಶ್ವರಿ ದರ್ಶನ ಮಾಡುತ್ತಿರುವ ಕುರಿತ ಪತ್ರಕರ್ತರ ಪ್ರಶ್ನೆಗೆ, ಚಾಮುಂಡಿ ಬೆಟ್ಟಕ್ಕೆ ಹೋದ ಮೇಲೆ ಚಾಮುಂಡಿ ದೇವಿಯ ದರ್ಶನ ಮಾಡಬೇಕಲ್ವಾ? ಇದರಲ್ಲಿ ವಿಶೇಷ ಏನಿದೆ? ಸಭೆಗೆ ಹೋಗುತ್ತಿದ್ದೇನೆ. ಹೀಗಾಗಿ ದರ್ಶನ ಮಾಡುತ್ತಿದ್ದೇನೆ ಅಷ್ಟೆ ಎಂದು ಸ್ಪಷ್ಪಪಡಿಸಿದರು.
ಸಿಎಂ ಮಾಡೋರು ಶಾಸಕರು, ಹೈಕಮಾಂಡ್: ಸಿದ್ದರಾಮಯ್ಯ
ಸಿದ್ದರಾಮಯ್ಯ ಅನುಮತಿ ಕೊಟ್ಟರೆ ಸಿಎಂ ಆಗುತ್ತೇನೆ ಎಂಬ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರ ಹೇಳಿಕೆ ಕುರಿತು ಹುಟ್ಟಿಕೊಂಡ ಚರ್ಚೆಗಳ ಕುರಿತು ನಗುನಗುತ್ತಲೇ ಪ್ರತಿಕ್ರಿಯಿಸಿದ ಅವರು, ಅದನ್ನು ನಿರ್ಧರಿಸುವವರು ಶಾಸಕರು ಹಾಗೂ ಹೈಕಮಾಂಡ್. ನಾನು ಹೇಗೆ ಯಾರನ್ನಾದರೂ ಮುಖ್ಯಮಂತ್ರಿ ಮಾಡಲು ಸಾಧ್ಯ? ಎಂದರು.