ಅಮಿತ್‌ ಶಾ ಬಗ್ಗೆ ಯತೀಂದ್ರ ಟೀಕೆಗೆ ಬಿಜೆಪಿ ತೀವ್ರ ಕೆಂಡ

| Published : Mar 30 2024, 12:48 AM IST / Updated: Mar 30 2024, 01:02 PM IST

yathindra siddaramaiah

ಸಾರಾಂಶ

ಕೇಂದ್ರ ಸಚಿವ ಅಮಿತ್‌ ಶಾ ಬಗ್ಗೆ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸಚಿವ ಅಮಿತ್‌ ಶಾ ಬಗ್ಗೆ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈ ಕುರಿತು ಪ್ರತಿಕ್ರಿಯೆ ನೀಡಿ, ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯು ಖಂಡನಾರ್ಹ. ಮಾತ್ರವಲ್ಲ, ಕೀಳುಮಟ್ಟದ್ದಾಗಿದೆ. ಮಾಜಿ ಶಾಸಕರಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಗಳ ಮಗನಾಗಿ ಕನಿಷ್ಠ ಘನತೆಯನ್ನೂ ಸಹ ಮರೆತಂತಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮೈಸೂರು ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್‌ ಸೋಲು ನಿಚ್ಚಳವಾಗಿದ್ದು, ಹತಾಶೆಯಿಂದ ಅವಹೇಳನಕಾರಿ ಪದಪ್ರಯೋಗ ಮಾಡಿದ್ದಾರೆ. ಅವರು ಕ್ಷಮೆ ಕೇಳಬೇಕು. ಇನ್ನುಮುಂದಾದರೂ ಸಾರ್ವಜನಿಕ ಜೀವನದಲ್ಲಿ ಸಭ್ಯತೆಯಿಂದ ವರ್ತಿಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಮಾಜಿ ಶಾಸಕ ಯತೀಂದ್ರ ಹೇಳಿಕೆಯಿಂದ ಅವರ ಯೋಗ್ಯತೆ ಏನೆಂಬುದು ತಿಳಿಯುತ್ತದೆ. ಮುಖ್ಯಮಂತ್ರಿಗಳ ಮಗನಾಗಿ ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಅವರ ಹೇಳಿಕೆಯು ಖಂಡನಾರ್ಹವಾಗಿದ್ದು, ತಕ್ಷಣ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಕೇಂದ್ರ ಗೃಹ ಸಚಿವರ ಬಗ್ಗೆ ನೀಡಿದ ಹೇಳಿಕೆ ವಿರುದ್ಧ ಬಿಜೆಪಿ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. 

ಯತೀಂದ್ರ ಹೀಗೆಯೇ ಮಾತನಾಡುತ್ತಿದ್ದರೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿಯಂತೆ ಜೈಲಿಗೆ ಹೋಗುವ ಸ್ಥಿತಿ ಬರಲಿದೆ. ಹತಾಶ ಮನೋಭಾವ, ಬುದ್ಧಿಭ್ರಮಣೆ ಹಾಗೂ ಅಪ್ರಬುದ್ಧತೆಯಿಂದ ಅವರು ಮಾತನಾಡಿದ್ದಾರೆ. ಅವರ ಪ್ರಜ್ಞೆಯ ಮಟ್ಟ ಬಹಳ ಕಡಿಮೆ ಇದೆ ಎಂದು ಟೀಕಿಸಿದರು.

ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮಾತನಾಡಿದ್ದ ಯತೀಂದ್ರ, ಗೃಹ ಸಚಿವ ಅಮಿತ್‌ ಶಾ ಅವರನ್ನು ಗೂಂಡಾ ಎಂದು ಟೀಕಿಸಿದ್ದರು.