ರಾಜ್ಯಪಾಲರ ಕ್ರಮಕ್ಕೆ ಸಿಎಂ ಆಕ್ರೋಶ: ಕ್ಷುಲ್ಲಕ ವಿಚಾರಗಳಿಗೆ ವರದಿ ಕೇಳುವುದು ಸರಿಯಲ್ಲ

| Published : Sep 24 2024, 01:50 AM IST / Updated: Sep 24 2024, 04:45 AM IST

ಸಾರಾಂಶ

ರಾಜ್ಯಪಾಲರು ಕ್ಷುಲ್ಲಕ ವಿಚಾರಗಳಿಗೆ ವರದಿ ಕೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ ಸಹಿ ಮಾಡುತ್ತಿದ್ದವರು ಇಂಗ್ಲೀಷ್‌ನಲ್ಲಿ ಸಹಿ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ರಾಜ್ಯಪಾಲರು ವರದಿ ಕೇಳಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

 ಬೆಂಗಳೂರು : ‘ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಸಣ್ಣ ಪುಟ್ಟ ವಿಷಯಗಳಿಗೆ ಗಮನ ನೀಡುತ್ತಿದ್ದಾರೆ. ಯಾವನೋ ದೂರು ನೀಡಿದ ಎಂಬ ಕಾರಣಕ್ಕೆ ಕ್ಷುಲ್ಲಕ ವಿಚಾರಗಳಿಗೂ ವರದಿ ಕೇಳುತ್ತಿದರೆ ಹೇಗೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಕ್ಷುಲ್ಲಕ ವಿಚಾರಗಳಿಗೆ ವರದಿ ಕೇಳುತ್ತಿದ್ದಾರೆ. ಯಾವನೋ ಒಬ್ಬ ಕನ್ನಡದಲ್ಲಿ ಸಹಿ ಮಾಡುತ್ತಿದ್ದವರು ಇಂಗ್ಲೀಷ್‌ನಲ್ಲಿ ಸಹಿ ಮಾಡಿದ್ದಾರೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಅದಕ್ಕೂ ರಾಜ್ಯಪಾಲರು ವರದಿ ಕೇಳಿದ್ದಾರೆ. ಇದು ನ್ಯಾಯನಾ ನೀವೇ ಹೇಳಿ ಎಂದು ಬೇಸರ ವ್ಯಕ್ತಪಡಿಸಿದರು.ನಾನು ಕನ್ನಡದಲ್ಲಿರುವ ಪತ್ರಗಳಿಗೆ ಕನ್ನಡದಲ್ಲಿ ಹಾಗೂ ಆಂಗ್ಲದಲ್ಲಿ ಪತ್ರಗಳಿಗೆ ಆಂಗ್ಲದಲ್ಲಿ ಸಹಿ ಮಾಡಿರುತ್ತೇನೆ. ಇದೇನು ತಪ್ಪಲ್ಲ. ಬೇರೆ ರಾಜ್ಯಗಳಿಗೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಾಗ ಅಥವಾ ಇಂಗ್ಲೀಷ್‌ ಕರಡುಗಳಿಗೆ ಸಹಿ ಹಾಕುವಾಗ ಇಂಗ್ಲೀಷ್‌ನಲ್ಲೇ ಸಹಿ ಹಾಕುತ್ತೇನೆ. ಕನ್ನಡದಲ್ಲಿರುವ ಪ್ರಸ್ತಾಪಗಳಿಗೆ ಕನ್ನಡದಲ್ಲಿ ಸಹಿ ಮಾಡುತ್ತೇನೆ. ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ರಾಜ್ಯಪಾಲರು ಉತ್ತರ ಕೇಳುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

--ಸಹಿಗೂ ತಗಾದೆಯೇ?

ಕನ್ನಡದಲ್ಲಿ ಸಹಿ ಮಾಡುತ್ತಿದ್ದವರು ಇಂಗ್ಲಿಷ್‌ನಲ್ಲಿ ಸಹಿ ಮಾಡಿದ್ದಾರೆ ಎಂದು ಯಾವನೋ ಒಬ್ಬ ದೂರು ನೀಡಿದ್ದಾನೆ. ಅದಕ್ಕೂ ರಾಜ್ಯಪಾಲರು ವರದಿ ಕೇಳಿದ್ದಾರೆ. ಇದು ನ್ಯಾಯನಾ? ಇಂಗ್ಲಿಷ್‌ ಕಡತಕ್ಕೆ ಇಂಗ್ಲಿಷ್‌ನಲ್ಲಿ, ಕನ್ನಡದ ಕಡತಕ್ಕೆ ಕನ್ನಡದಲ್ಲಿ ನಾನು ಸಹಿ ಮಾಡುತ್ತೇನೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಉತ್ತರಿಸಲೇಬೇಕಿಲ್ಲ

ರಾಜ್ಯಪಾಲರು ಕೇಳಿದ್ದಕ್ಕೆಲ್ಲ ಉತ್ತರ ಕೊಡಲೇಬೇಕು ಎಂದೇನಿಲ್ಲ. ಯಾವುದಕ್ಕೆ ಉತ್ತರ ಕೊಡಬೇಕೋ ಅದಕ್ಕೆ ಕೊಡುತ್ತೇವೆ. ರಾಜ್ಯಪಾಲರು ಪ್ರತಿದಿನ ಪತ್ರ ಬರೆದು ಮಾಹಿತಿ ಕೊಡಿ ಅನ್ನುತ್ತಿದ್ದಾರೆ. ಹೀಗೆ ದಿನನಿತ್ಯದ ವ್ಯವಹಾರಕ್ಕೆಲ್ಲ ವರದಿ ಕೇಳುವುದು ಸಂವಿಧಾನಕ್ಕೆ ವಿರುದ್ಧ.

- ಡಾ.ಜಿ.ಪರಮೇಶ್ವರ್‌, ಗೃಹ ಸಚಿವ--

ಬಿಜೆಪಿಯವರು ಯಾಕೆ ಅರ್ಕಾವತಿ ವರದಿ ಮಂಡಿಸಲಿಲ್ಲ: ಸಿಎಂ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ರಾಜ್ಯಪಾಲರು ಅರ್ಕಾವತಿ ಡೀನೋಟಿಫಿಕೇಷನ್‌ ತನಿಖಾ ವರದಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಹಿಂದೆ ನಾಲ್ಕು ವರ್ಷ ಅವಧಿಯಲ್ಲಿದ್ದಾಗ ವರದಿಯನ್ನು ಏಕೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಿಲ್ಲ. ಇದೇ ಸಿ.ಟಿ.ರವಿ ಸಚಿವರಾಗಿದ್ದರು. ಆಗ ನಾಲ್ಕು ವರ್ಷ ಯಾಕೆ ವರದಿ ಮಂಡಿಸಲಿಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿಯ ಸಿ.ಟಿ.ರವಿ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರಾಜ್ಯಪಾಲರು ವರದಿ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಕೆ.ಎನ್‌. ಕೇಶವ ನಾರಾಯಣ ಸಮಿತಿ ವರದಿ ಸೇರಿದಂತೆ ಹಲವು ವಿಚಾರಗಳಿವೆ. ರಾಜ್ಯಪಾಲರು ಬರೆದಿರುವ ಪತ್ರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.