ಸಾರಾಂಶ
ಮೈಸೂರು: ತೀವ್ರ ಬರಗಾಲವಿದ್ದರೂ ರಾಜ್ಯಕ್ಕೆ ಬರ ಪರಿಹಾರ ನೀಡದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕನ್ನಡಿಗರ ಮತ ಕೇಳಲು ಯಾವುದೇ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ತೀವ್ರ ಬರಗಾಲವಿದೆ. ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರ ಎದುರಿಸುತ್ತಿವೆ. ಹೀಗಾಗಿ, ಕೇಂದ್ರದಿಂದ 18 ಸಾವಿರ ಕೋಟಿ ರು.ಗಳ ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ. ಆದರೆ, ನಮಗೆ ಬರಗಾಲದ ಪರಿಹಾರವಾಗಿ ಐದು ಪೈಸೆಯೂ ಈವರೆಗೆ ಬಂದಿಲ್ಲ. ಪರಿಹಾರ ಕೊಡದೆ ಇಲ್ಲಿಗೆ ಬಂದು ಹೇಗೆ ಮತ ಕೇಳುತ್ತಾರೆ? ಎಂದು ಅಮಿತ್ ಶಾ ವಿರುದ್ಧ ಕಿಡಿ ಕಾರಿದರು.
ನಾವೇನು ಕೇಂದ್ರದ ಬಳಿ ಭಿಕ್ಷೆ ಬೇಡುತ್ತಿಲ್ಲ. ನಾವು ತೆರಿಗೆ ಕಟ್ಟುತ್ತೇವೆ, ನಮ್ಮ ತೆರಿಗೆ ಹಣದ ಪಾಲು ಕೇಳುತ್ತಿದ್ದೇವೆ. ಅಮಿತ್ ಶಾ ಅವರು ತಮ್ಮ ಮನೆಯಿಂದ ಬರ ಪರಿಹಾರದ ಹಣ ಕೊಡುತ್ತಾರಾ? ಅದೆನೂ ನಮಗೆ ಭಿಕ್ಷೆಯೇ ಎಂದವರು ಖಾರವಾಗಿ ಪ್ರಶ್ನಿಸಿದರು.
ಜೆಡಿಎಸ್‌ನವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಒಟ್ಟಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಕುಮಾರಸ್ವಾಮಿಯವರು ಬಿಜೆಪಿಯ ವಕ್ತಾರರ ರೀತಿ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿಯವರು ರಾಜ್ಯಕ್ಕೆ ಬರ ಪರಿಹಾರ ಕೊಡಿಸಿ ನಂತರ ಅಮಿತ್ ಶಾರನ್ನು ಕರೆದುಕೊಂಡು ಬರಬೇಕಿತ್ತು. ಕನ್ನಡಿಗರು ಅವರಿಗೆ ಇದನ್ನೆಲ್ಲಾ ಕೇಳಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಪರಿಹಾರ ಕೊಡದೇ ಇರುವುದನ್ನು ಕುಮಾರಸ್ವಾಮಿಯವರು ಸಮರ್ಥಿಸಿಕೊಳ್ಳುತ್ತಾರಾ ಎಂದು ಅವರು ಪ್ರಶ್ನಿಸಿದರು. ಕನ್ನಡಿಗರು ಈ ಚುನಾವಣೆಯಲ್ಲಿ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಕಿಡಿ ಕಾರಿದರು.