ಸಾರಾಂಶ
ಮುಂಬೈ: ಮುಂಬರುವ ಲೋಕಸಭಾ ಚುನಾವಣೆಗೆ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಸಮ್ಮಿಶ್ರ ಸರ್ಕಾರ ಸೀಟು ಹಂಚಿಕೆಯನ್ನು ಬಹುತೇಕ ಅಂತಿಮಗೊಳಿಸಿದ್ದು, ಬಿಜೆಪಿ 26 ಹಾಗೂ ಶಿಂಧೆ ಶಿವಸೇನೆ ಹಾಗೂ ಅಜಿತ್ ಪವಾರ್‌ರ ಎನ್‌ಸಿಪಿ ಸೇರಿ 22 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘3 ಪಕ್ಷದ ನಾಯಕರೊಂದಿಗೆ ಚರ್ಚಿಸಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ. ಚಳಿಗಾಲದ ಅಧಿವೇಶನ ಮುಗಿದ ಬಳಿಕ ಜಂಟಿ ಪ್ರಚಾರವನ್ನು ಆರಂಭಿಸಲಾಗುವುದು. ಎಲ್ಲ ಕ್ಷೇತ್ರಗಳಲ್ಲೂ ಮೂರೂ ಪಕ್ಷಗಳ ಕಾರ್ಯಕರ್ತರು ಪರಸ್ಪರರಿಗೆ ಸಹಕಾರ ನೀಡಿ ಮೈತ್ರಿಕೂಟವು 40-42 ಸ್ಥಾನಗಳಲ್ಲಿ ಗೆಲ್ಲಲು ಶ್ರಮಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
ಮರಾಠಾ ಮೀಸಲಾತಿಗೆ ಶೀಘ್ರ ಪರಿಹಾರ:ಇದೇ ವೇಳೆ ಮರಾಠಾ ಮೀಸಲಾತಿಗೆ ಶೀಘ್ರ ಪರಿಹಾರ ಕಲ್ಪಿಸುವ ಕುರಿತು ಮಾತನಾಡಿ, ‘ಸುಪ್ರೀಂ ಕೋರ್ಟ್‌ನ ಸೂಚನೆಗೆ ಧಕ್ಕೆ ಬಾರದಂತೆ ಲೋಕಸಭಾ ಚುನಾವಣೆಯ ಒಳಗೆ ಮರಾಠರಿಗೆ ಮೀಸಲಾತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದು ನಮ್ಮ ಆದ್ಯತೆ’ ಎಂದು ತಿಳಿಸಿದರು.